ಒತ್ತಡ ಸೇರಿದಂತೆ ನಾನಾ ಕಾರಣದಿಂದ ಕೂದಲು ಉದುರುತ್ತವೆ ಎಂದು ಹೇಳುವುದನ್ನು ಸಾಮಾನ್ಯವಾಗಿ ಕೇಳಿರುತ್ತೀರಿ.
ಒತ್ತಡಕ್ಕಿಂತ ಹೆಚ್ಚಾಗಿ ಆರೈಕೆ ಇಲ್ಲದ ಕಾರಣ ಕೂದಲು ಉದುರುತ್ತವೆ. ಸರಿಯಾಗಿ ಗೊಬ್ಬರ ಹಾಕಿದರೆ ಬೆಳೆಗಳು ನಳನಳಿಸುತ್ತವೆ. ಅದೇ ರೀತಿ ಪೌಷ್ಠಿಕಾಂಶ ಕೊರತೆಯಿಂದಲೂ ಕೆಲವೊಮ್ಮೆ ಕೂದಲು ಉದುರುವ ಸಾಧ್ಯತೆ ಇರುತ್ತದೆ. ಕೂದಲಿನ ಆರೈಕೆ ಕುರಿತಾಗಿ ಒಂದಿಷ್ಟು ಟಿಪ್ಸ್ ಇಲ್ಲಿವೆ.
ದಾಸವಾಳದ ಎಲೆಗಳನ್ನು ಶುಚಿಯಾಗಿಸಿಕೊಂಡು ರುಬ್ಬಿರಿ. ಅದರೊಂದಿಗೆ 2 ಚಮಚ ಮೊಸರು ಬೆರೆಸಿಕೊಂಡು ಚೆನ್ನಾಗಿ ತಲೆಗೆ ಹಚ್ಚಿ ಅರ್ಧ ಗಂಟೆ ನಂತರ ಸ್ನಾನ ಮಾಡುವುದರಿಂದ ಹೊಟ್ಟು ನಿವಾರಣೆಯಾಗುತ್ತದೆ. ಮಾತ್ರವಲ್ಲ, ಕೂದಲು ಉದುರುವುದು ನಿಲ್ಲುತ್ತದೆ.
ಕರಿಬೇವಿನ ಎಲೆಗಳನ್ನು ಒಣಗಿಸಿ ಪುಡಿ ಮಾಡಿಕೊಂಡು ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿಕೊಳ್ಳಿ. ರಾತ್ರಿ ಮಲಗುವ ಮೊದಲು ತಲೆಯ ಕೂದಲಿಗೆ ಹಚ್ಚಿ ಮಸಾಜ್ ಮಾಡಿಕೊಳ್ಳಿ. ಇದರಿಂದ ಕೂದಲಿನ ಕಾಂತಿ ಹೆಚ್ಚುತ್ತದೆ.
ಸ್ವಲ್ಪ ಬಿಸಿ ಮಾಡಿದ ಕೊಬ್ಬರಿ ಎಣ್ಣೆಯಲ್ಲಿ ದಾಸವಾಳದ ಹೂವುಗಳನ್ನು ಹಾಕಿ ಕೂದಲಿಗೆ ಹಚ್ಚುವುದರಿಂದ ಕೂದಲಿಗೆ ಉತ್ತಮ ಸಂರಕ್ಷಣೆ ಸಿಗುತ್ತದೆ.
ವಾರಕ್ಕೊಮ್ಮೆಯಾದರೂ ತಲೆಗೆ ಮಸಾಜ್ ಮಾಡಿ, ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಕರಿಬೇವು, ಬೇವು, ದಾಸವಾಳ ಹೂವಿನ ಗಿಡದ ಎಲೆಗಳನ್ನು ರುಬ್ಬಿ ತಲೆಗೆ ಹಚ್ಚಿ ಸ್ನಾನ ಮಾಡಿದಾಗ ಕೂದಲಿನ ಕಾಂತಿ ಹೆಚ್ಚಾಗುತ್ತದೆ.