ಗೆಣಸು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದನ್ನು ಹಾಗೇ ಬೇಯಿಸಿ ತಿನ್ನುವುದುಕ್ಕಿಂತ ರುಚಿಯಾದ ತಿನಿಸುಗಳನ್ನು ಮಾಡಬಹುದು. ಉಪ್ಪಿನಕಾಯಿ ಅಥವಾ ಚಟ್ನಿ ಜೊತೆ ಗೆಣಸಿನ ಪರೋಟ ಮಾಡಿಕೊಂಡು ತಿಂದ್ರೆ ನೀವು ಬಾಯಿ ಚಪ್ಪರಿಸದೇ ಇರಲು ಸಾಧ್ಯವೇ ಇಲ್ಲ. ಅಷ್ಟು ರುಚಿಯಾಗಿರುತ್ತೆ ಈ ಗೆಣಸಿನ ಪರೋಟ. ಅದನ್ನು ಹೇಗೆ ಮಾಡೋದು ನೋಡೋಣ.
ಬೇಕಾಗುವ ಸಾಮಗ್ರಿ : ಸುಮಾರು 300 ಗ್ರಾಂನಷ್ಟು ಗೆಣಸು, 2 ಕಪ್ ಗೋಧಿ ಹಿಟ್ಟು, ಕಾಲು ಚಮಚ ಅರಿಶಿನ, ಅರ್ಧ ಚಮಚ ಗರಂ ಮಸಾಲ, ಅರ್ಧ ಚಮಚ ಆಮ್ ಚೂರ್ ಪೌಡರ್, ಕಾಲು ಚಮಚ ಓಮ, ಸಣ್ಣಗೆ ಹೆಚ್ಚಿದ 1 ಹಸಿಮೆಣಸಿನ ಕಾಯಿ, ಅರ್ಧ ಚಮಚ ಶುಂಠಿ ಪೇಸ್ಟ್, 1 ಚಮಚ ಕಸೂರಿ ಮೇಥಿ, ಅರ್ಧ ಚಮಚ ಉಪ್ಪು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಸ್ವಲ್ಪ ಎಣ್ಣೆ, ಹಿಟ್ಟು ಕಲಸಲು ನೀರು.
ಮಾಡುವ ವಿಧಾನ : ಒಂದು ಕುಕ್ಕರ್ ನಲ್ಲಿ ನೀರು ಹಾಕಿ ಸ್ವಲ್ಪ ಉಪ್ಪು ಹಾಗೂ ಗೆಣಸನ್ನು ಹಾಕಿ 3 ವಿಶಲ್ ಕೂಗಿಸಿ. ಅದು ತಣ್ಣಗಾದ ಬಳಿಕ ಗೆಣಸಿನ ಸಿಪ್ಪೆ ತೆಗೆದು ಚೆನ್ನಾಗಿ ಮ್ಯಾಶ್ ಮಾಡಿ. ಅದಕ್ಕೆ ಗೋಧಿ ಹಿಟ್ಟು, ಅರಿಶಿನ, ಗರಂ ಮಸಾಲ, ಆಮ್ ಚೂರ್ ಪೌಡರ್, ಓಮ, ಹಸಿಮೆಣಸಿನ ಕಾಯಿ, ಶುಂಠಿ ಪೇಸ್ಟ್, ಕಸೂರಿ ಮೇಥಿ, ಉಪ್ಪು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಗೂ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕಲಸಿಕೊಳ್ಳಿ. ಎರಡು ಚಮಚ ಎಣ್ಣೆ ಹಾಕಿ ಚೆನ್ನಾಗಿ ನಾದಿಕೊಂಡು 20 ನಿಮಿಷ ಹಾಗೇ ಬಿಡಿ.
ನಂತರ ಸ್ವಲ್ಪ ಗೋಧಿ ಹಿಟ್ಟನ್ನು ಹಾಕಿಕೊಂಡು ಚಪಾತಿಗಿಂತ ಸ್ವಲ್ಪ ದಪ್ಪಗೆ ಲಟ್ಟಿಸಿ. ಕಾದ ತವಾದ ಮೇಲೆ ಹಾಕಿ ಬೇಯಿಸಿ. ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ ಎರಡೂ ಕಡೆ ಚೆನ್ನಾಗಿ ಬೇಯಿಸಿ ತೆಗೆಯಿರಿ. ರಾಯಿತ ಅಥವಾ ಉಪ್ಪಿನಕಾಯಿ ಜೊತೆಗೂ ಇದನ್ನು ಸರ್ವ್ ಮಾಡಬಹುದು.