ಮಳೆಗಾಲದಲ್ಲಿ ಕರೆಂಟ್ ಶಾಕ್ ಹೊಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಈ ಸಮಯದಲ್ಲಿ ವಿದ್ಯುತ್ ಉಪಕರಣಗಳನ್ನು ಬಳಕೆ ಮಾಡುವಾಗ ಭಾರೀ ಜಾಗೃತೆಯಿಂದ ಇರಬೇಕು. ಆದರೂ ಕೆಲವೊಮ್ಮೆ ಅಚಾತುರ್ಯಗಳು ಸಂಭವಿಸಿ ಬಿಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯುತ್ ಅವಘಡಗಳಿಂದ ನಿಮ್ಮನ್ನು ನೀವು ಹೇಗೆ ಪಾರುಮಾಡಿಕೊಳ್ಳಬೇಕು ಎಂಬುದಕ್ಕೆ ಇಲ್ಲಿದೆ ಮಾಹಿತಿ :
ಮಳೆಗಾಲ ಅಂತಲ್ಲ ಯಾವುದೇ ಸಂದರ್ಭದಲ್ಲಿಯೂ ಒದ್ದೆ ಕೈಗಳಿಂದ ಸ್ವಿಚ್ ಬೋರ್ಡ್ಗಳನ್ನು ಮುಟ್ಟುವ ಗೋಜಿಗೆ ಹೋಗಬೇಡಿ. ಪ್ಲಗ್ಗಳನ್ನು ತೆಗೆಯುವ ಸ್ವಿಚ್ ಆಫ್ ಮಾಡಿದ್ದೀರಿ ಅನ್ನೋದು ಪರಿಶೀಲನೆ ಮಾಡಿಕೊಳ್ಳಿ. ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಮನೆಗೆ ಒಮ್ಮೆ ಎಲೆಕ್ಟ್ರಿಷಿಯನ್ ಕರೆಸಿ ಎಲ್ಲಾ ಸ್ವಿಚ್ ಬೋರ್ಡ್ಗಳನ್ನು ಪರೀಕ್ಷೆ ಮಾಡಿಸಿ. ಮನೆಯ ಅರ್ಥಿಂಗ್ ವ್ಯವಸ್ಥೆ ಸರಿಯಾಗಿ ಇದೆಯೇ ಎಂಬುದನ್ನು ನೋಡಿಕೊಳ್ಳಿ. ಬಚ್ಚಲು ಮನೆಯಂತಹ ಒದ್ದೆ ಇರುವ ಜಾಗಗಳಲ್ಲಿ ಚಪ್ಪಲಿಗಳನ್ನು ಬಳಸಿ ಸ್ವಿಚ್ಬೋರ್ಡ್ ಹತ್ತಿರ ಹೋಗುವುದು ಉತ್ತಮ. ಎಲ್ಲಕ್ಕಿಂತ ಮುಖ್ಯವಾಗಿ ಮನೆಗೆ ಐಎಸ್ಐ ಮಾರ್ಕ್ ಇರುವ ವೈರ್ಗಳನ್ನೇ ಬಳಕೆ ಮಾಡಿ .
ಇಷ್ಟೆಲ್ಲ ಮುಂಜಾಗ್ರತೆಯ ಬಳಿಕವೂ ಒಂದು ವೇಳೆ ವಿದ್ಯುತ್ ಅವಘಡ ಸಂಭವಿಸಿಯೇ ಬಿಡ್ತು ಎಂದರೆ ಏನು ಮಾಡಬೇಕು..? ವಿದ್ಯುತ್ ಶಾಕ್ಗೆ ಒಳಗಾದ ವ್ಯಕ್ತಿಯ ಮೇಲೆ ನೀರು ಹಾಕಬಾರದು. ಕೂಡಲೇ ಅವರನ್ನು ಮುಟ್ಟಲೂ ಸಹ ಹೋಗಬೇಡಿ. ಮೇನ್ ಸ್ಚಿಚ್ ಬಂದ್ ಮಾಡಿ ಬಳಿಕ ಒಣಗಿದ ಕಟ್ಟಿಗೆಯ ಸಹಾಯದಿಂದ ಅವರನ್ನು ಪಾರು ಮಾಡಲು ಯತ್ನಿಸಿ. ಮೇನ್ ಬೋರ್ಡ್ ಹತ್ತಿರ ಹೋಗುವಾಗಲೂ ಸಹ ಬರಿಗೈಯಲ್ಲಿ ಅದನ್ನು ಮುಟ್ಟುವುದು ಸೂಕ್ತವಲ್ಲ. ಒಣಗಿದ ಚಪ್ಪಲಿ ಹಾಗೂ ಕೈಗೆ ಒಣಗಿದ ಬಟ್ಟೆ ಸುತ್ತಿಕೊಂಡು ಪರಿಶೀಲನೆ ನಡೆಸಿ.