ಹೋಮ್ ವರ್ಕ್ ದ್ವೇಷಿಗಳ ಸಂಖ್ಯೆ ದೊಡ್ಡದಿದೆ. ಮಕ್ಕಳ ಕಲಿಕೆ ಚೆನ್ನಾಗಿರಲಿ ಎಂದು ಶಿಕ್ಷಕರು ಹೋಮ್ ವರ್ಕ್ ಕೊಡುವುದು ಸಾಮಾನ್ಯ. ಆದರೆ, ಸಾಕಷ್ಟು ಮಕ್ಕಳಿಗೆ ಅದು ಇಷ್ಟವಾಗದ ವಿಚಾರ. ಕೆಲವರು ಹತಾಶೆ ತೋರಿಸುವುದೂ ಉಂಟು. ಆಟವಾಡಲು ಹೆಚ್ಚು ಆಸಕ್ತರಾದ ಮಕ್ಕಳಿಗೆ ಹೋಮ್ ವರ್ಕ್ ಒಂದು ರೀತಿಯ ಒತ್ತಡ. ಈ ವರ್ಗಕ್ಕೆ ಸೇರಿದ ಪುಟ್ಟ ಹುಡುಗನ ಹತಾಶೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೋಮ್ ವರ್ಕ್ ಮುಗಿಸುವಂತೆ ತಾಯಿ ಸೂಚಿಸುತ್ತಾರೆ, ಆಗ ಮಗ ತಾಳ್ಮೆ ಕಳೆದುಕೊಂಡು ಬೇಸರದಿಂದ ತನ್ನ ಪೆನ್ಸಿಲ್ ಅನ್ನು ಪುಸ್ತಕಕ್ಕೆ ಬಡಿಯುತ್ತಾ ಗೊಣಗುವುದು ಕಂಡುಬರುತ್ತದೆ. ಪ್ರಪಂಚವೇ ಸಾಕೆಂಬ ಮಗುವಿನ ಮಾತು ಕೇಳಿದರೆ ಆಶ್ಚರ್ಯವಾಗುತ್ತದೆ.
ಹೋಮ್ ವರ್ಕ್ ಮಾಡಲು ಕೇಳಿದಾಗ ಮಗುವು ಕಿರಿಕಿರಿಗೊಂಡು ಮಾತನಾಡುತ್ತಾನೆ, ಮಮ್ಮಿ, ಮೈ ಪರಿಶಾನ್ ಹೋ ರಹಾ ಹೂಂ, ಮೈ ದುನಿಯಾ ಮೇ ಕ್ಯೂಂ ಆಯಾ ಹೂಂ. ಮೈ ದುನಿಯಾ ಸೇ ನಿಕಲ್ ಜಾವೂಂಗಾ, ನಿಕಲ್ ಜಾವೂಂಗ ಎಂದು ಪೆನ್ಸಿಲ್ ಅನ್ನು ಪುಸ್ತಕಕ್ಕೆ ಬಡಿಯುತ್ತಾನೆ.
ತಾಯಿಯು ಕ್ಯುಂ ನಿಕಲ್ ಜಾವೋಗೆ ಎಂದು ಕೇಳಿದಾಗ, ಮುಜೆ ದುನಿಯಾ ಮೇ ಮನ್ ನಹೀ ಲಗ್ತಾ ಎಂದು ಉತ್ತರಿಸುತ್ತಾನೆ. ಅವನ ಉತ್ತರವನ್ನು ಕೇಳಿ ಅವನ ತಾಯಿಗೆ ನಗು ಉಕ್ಕಿ ಬರುತ್ತದೆ.
ಈ ವಿಡಿಯೋ ಕಂಡ ನೆಟ್ಟಿಗರಿಗೆ ನಗು ತಡೆಯಲಾಗಿಲ್ಲ. ಅನೇಕರು ಕಾಮೆಂಟ್ ಮಾಡಿದ್ದರೆ. ಇನ್ನು ಕೆಲವರು ಇಂತಹ ಚಿಕ್ಕ ಮಕ್ಕಳು ಈ ವಿಷಯಗಳನ್ನು ಎಲ್ಲಿಂದ ಕಲಿಯುತ್ತಾರೆ ಎಂದು ಆಶ್ಚರ್ಯ ಪಟ್ಟಿದ್ದಾರೆ.