ಕೊರೊನಾ ವೈರಸ್ ಹರಡುವಿಕೆಯನ್ನ ನಿಯಂತ್ರಣ ಮಾಡುವ ಸಲುವಾಗಿ ಮದುವೆಯಂತಹ ಸಾಂಪ್ರದಾಯಿಕ ಆಚರಣೆಯನ್ನೇ ಬದಲಾವಣೆ ಮಾಡಲಾಗಿದೆ. ಹೆಚ್ಚು ಜನರು ಒಂದೆಡೆ ಸೇರಬಾರದು ಅಂತಾ ಕಡಿಮೆ ಜನಸಂಖ್ಯೆಯಲ್ಲೇ ಮದುವೆಯಾಗಿ ಎಂದು ಸರ್ಕಾರಗಳು ಮಾರ್ಗಸೂಚಿ ಹೊರಡಿಸಿವೆ.
ಈ ಎಲ್ಲದರ ನಡುವೆ ಮಹಾರಾಷ್ಟ್ರ ಥಾಣೆ ಜಿಲ್ಲೆಯ ಕುಟುಂಬವೊಂದು ಸಾವಿರಾರುಗಟ್ಟಲೇ ಕಿಲೋಮೀಟರ್ ದೂರದಲ್ಲಿ ಕೂತು ತಮ್ಮ ಪುತ್ರನ ಮದುವೆಯನ್ನ ಕಣ್ತುಂಬಿಕೊಂಡಿದೆ..!
ದೊಂಬಿವಿಲಿಯಲ್ಲಿ ವಾಸವಿರುವ ಪೋಷಕರು ಕೆನಡಾದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಪುತ್ರ ಭೂಷಣ್ ಚೌಧರಿ ಹಾಗೂ ಮಂದೀಪ್ ಕೌರ್ರ ಮದುವೆಯನ್ನ ಆನ್ಲೈನ್ನಲ್ಲಿ ನೋಡಿ ಖುಷಿಪಟ್ಟಿದೆ.
ಈ ವಿಶೇಷವಾದ ಮದುವೆಯು ಶನಿವಾರ ನಡೆದಿದೆ. ದೊಂಬಿವಿಲಿಯಲ್ಲಿ ಪುರೋಹಿತರು ಮಂತ್ರಪಠಿಸುತ್ತಿದ್ದರೆ ಕೆನಡಾದಲ್ಲಿದ್ದ ಜೋಡಿ ಪರಸ್ಪರ ಹಾರ ಬದಲಾಯಿಸಿಕೊಂಡಿದೆ. ಈ ಮದುವೆಯನ್ನ ಫೇಸ್ಬುಕ್, ಯುಟ್ಯೂಬ್ ನಂತಹ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ನೇರ ಪ್ರಸಾರ ಮಾಡಲಾಗಿದೆ.
ಮನೆಯಲ್ಲೇ ಕೂತು ಮದುವೆ ನೋಡುತ್ತಿದ್ದ ಕುಟುಂಬಸ್ಥರು ಸಾಂಕೇತಿಕವಾಗಿ ವಧು-ವರರ ತಲೆಗೆ ಅಕ್ಷತೆ ಕಾಳನ್ನ ಹಾಕಿದ್ರು.
ಪುತ್ರನ ಈ ವಿಶಿಷ್ಠ ಮದುವೆ ವಿಚಾರವಾಗಿ ಮಾತನಾಡಿದ ವರನ ತಂದೆ ಹಿರಾಮನ್ ಚೌಧರಿ, ಎರಡೂ ಕುಟುಂಬಗಳಿಗೆ ಈ ಮದುವೆಯನ್ನ ಆದಷ್ಟು ಬೇಗ ಮಾಡಿ ಮುಗಿಸಬೇಕೆಂಬ ಹೆಬ್ಬಯಕೆ ಇತ್ತು. ಈ ಪ್ರಸ್ತುತ ಪರಿಸ್ಥಿತಿಯಲ್ಲಿ ನಮಗೆ ಇದಕ್ಕಿಂತ ಬೇರೆ ಒಳ್ಳೆಯ ಮಾರ್ಗ ಕಾಣಲಿಲ್ಲ ಎಂದು ಹೇಳಿದ್ರು. ಅಲ್ಲದೇ ಈ ರೀತಿಯ ಮದುವೆಯಿಂದ ಹಣ ಕೂಡ ವ್ಯರ್ಥವಾಗೋದಿಲ್ಲ ಎಂದು ಚೌಧರಿ ಹೇಳಿದ್ರು.