alex Certify ಕಲಾಪದ ವೇಳೆಯಲ್ಲೇ ಕೋರ್ಟ್ ನಲ್ಲಿ ಭಾರಿ ಸ್ಫೋಟ: ಓರ್ವ ಸಾವು, ಐವರಿಗೆ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಲಾಪದ ವೇಳೆಯಲ್ಲೇ ಕೋರ್ಟ್ ನಲ್ಲಿ ಭಾರಿ ಸ್ಫೋಟ: ಓರ್ವ ಸಾವು, ಐವರಿಗೆ ಗಾಯ

ಲೂಧಿಯಾನ: ಲೂಧಿಯಾನ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಗುರುವಾರ ಸಂಭವಿಸಿದ ಸ್ಫೋಟದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ.

ಜಿಲ್ಲಾ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿದ್ದ ವೇಳೆ ಎರಡನೇ ಮಹಡಿಯ ವಾಶ್ ರೂಂನಲ್ಲಿ ಸ್ಫೋಟ ಸಂಭವಿಸಿದೆ ಎಂದು ಸ್ಥಳದಲ್ಲಿದ್ದ ವಕೀಲರು ತಿಳಿಸಿದ್ದಾರೆ.

ಲೂಧಿಯಾನ ಪೊಲೀಸ್ ಕಮಿಷನರ್ ಗುರುಪ್ರೀತ್ ಸಿಂಗ್ ಭುಲ್ಲರ್ ಅವರು, ಪ್ರದೇಶವನ್ನು ಸೀಲ್ ಮಾಡಲಾಗಿದೆ. ವಿಧಿವಿಜ್ಞಾನ ತಂಡಗಳು ಸ್ಫೋಟದ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸುತ್ತವೆ. ಸ್ಫೋಟದ ಮೂಲವು ಸದ್ಯಕ್ಕೆ ಅಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.

ಒಬ್ಬರ ಮೃತದೇಹವನ್ನು ಹೊರತೆಗೆಯಲಾಗಿದೆ. ವ್ಯಕ್ತಿ ಸ್ಫೋಟಕವನ್ನು ಹೊತ್ತೊಯ್ಯುತ್ತಿದ್ದನೆ ಅಥವಾ ಅದರ ಸಮೀಪದಲ್ಲಿದ್ದನೆ ಎನ್ನುವುದು ಗೊತ್ತಾಗಿಲ್ಲ. ದೆಹಲಿಯಿಂದ ಎನ್‌ಎಸ್‌ಜಿ ತಂಡದ ಆಗಮನಕ್ಕಾಗಿ ಕಾಯುತ್ತಿದ್ದೇವೆ. ಗಾಯಗೊಂಡಿರುವ ಐವರು ಅಪಾಯದಿಂದ ಪಾರಾಗಿದ್ದಾರೆ ಎಂದು ಭುಲ್ಲಾರ್ ತಿಳಿಸಿದ್ದಾರೆ.

ಘಟನೆಯ ಕುರಿತು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು, ಪಂಜಾಬ್ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಸ್ಫೋಟದ ಬಗ್ಗೆ ಗೃಹ ಸಚಿವಾಲಯ ರಾಜ್ಯ ಸರ್ಕಾರದಿಂದ ವರದಿ ಕೇಳಿದೆ. ಎನ್ಐಎ ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿಯ ಅಧಿಕಾರಿಗಳು ಪರಿಶೀಲನೆಗಾಗಿ ಸ್ಥಳಕ್ಕೆ ತೆರಳಿದ್ದಾರೆ.

ಸ್ಫೋಟಕ್ಕೆ ನಿಮಿಷಗಳ ಮೊದಲು, ಶಾಸಕ ಸಿಮರ್‌ ಜೀತ್ ಬೈನ್ಸ್ ವಿರುದ್ಧದ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆದಿತ್ತು, ಇದರಲ್ಲಿ ಬೈನ್ಸ್ ಅವರು ತಮ್ಮ ವಿರುದ್ಧ ಹೊರಡಿಸಲಾದ ಜಾಮೀನು ರಹಿತ ವಾರಂಟ್‌ಗಳಿಗೆ ಪ್ರತಿಕ್ರಿಯೆಯಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಇದು ಐದನೇ ಮಹಡಿಯ ನ್ಯಾಯಾಲಯದ ಕೊಠಡಿಯಲ್ಲಿತ್ತು. ಪ್ರಕರಣದ ದೂರುದಾರರ ಪರ ವಕೀಲ ಮತ್ತು ಎಸ್‌ಎಡಿ ನಾಯಕ, ವಕೀಲ ಹರೀಶ್ ರೈ ದಂಡಾ, ನಾನು ಕಟ್ಟಡದಿಂದ ಹೊರಬಂದ ಕೆಲವು ಸೆಕೆಂಡುಗಳ ನಂತರ ಸ್ಫೋಟ ಸಂಭವಿಸಿದೆ. ಬಹುಶಃ ನಾನು ಗುರಿಯಾಗಿರಬಹುದು. ಇದು ಕಾಂಗ್ರೆಸ್ ಸರ್ಕಾರದ ಸಂಪೂರ್ಣ ಆಡಳಿತ ವೈಫಲ್ಯ ಎಂದು ಟೀಕಿಸಿದ್ದಾರೆ..

ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ, ರಾಜ್ಯದಲ್ಲಿ ಶಾಂತಿ ಕದಡಲು ದೇಶ ವಿರೋಧಿ ಶಕ್ತಿಗಳು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ್ದಾರೆ. ಪಂಜಾಬ್ ನಲ್ಲಿ ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವಂತೆ ಕೆಲವು ದೇಶ ವಿರೋಧಿ ಮತ್ತು ಪಂಜಾಬ್ ವಿರೋಧಿ ಶಕ್ತಿಗಳು ಶಾಂತಿ ಕದಡಲು ಪ್ರಯತ್ನಿಸುತ್ತಿವೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...