ಕೊರೊನಾ ಸಾಂಕ್ರಾಮಿಕದ ನಡುವೆಯೇ ಉದ್ಯೋಗ ಕಳೆದುಕೊಂಡ ಕೈಗಾರಿಕಾ ವಲಯದ ಕಾರ್ಮಿಕರಿಗೆ ನಿರುದ್ಯೋಗ ಸೌಲಭ್ಯಗಳನ್ನು ಇನ್ನೂ ಒಂದು ವರ್ಷ ಮುಂದುವರಿಸೋದಾಗಿ ಉದ್ಯೋಗಿಗಳ ರಾಜ್ಯ ವಿಮಾ ನಿಗಮವು ಘೋಷಣೆ ಮಾಡಿದೆ.
ಈ ವರ್ಷದ ಜೂನ್ 30ರವರೆಗೆ ಏಜನ್ಸಿ ಸೌಕರ್ಯಗಳನ್ನು ನೀಡಲಿದೆ ಎಂದು ಇಸಿಐಸಿ ಈ ಮೊದಲು ಘೋಷಣೆ ಮಾಡಿತ್ತು. ಇದೀಗ ಈ ಅವಧಿಯನ್ನು ಮುಂದಿನ ವರ್ಷ ಜೂನ್ 30ರವರೆಗೆ ವಿಸ್ತರಿಸಿದೆ. ಇಎಸ್ಐಸಿ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಕಾರ್ಮಿಕರಿಗೆ ಹಣಕಾಸಿನ ನೆರವನ್ನು ನೀಡುತ್ತದೆ.
ಇಎಸ್ಐಸಿ ಬೋರ್ಡ್ ಮೀಟಿಂಗ್ನಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಇದರಿಂದ ಉದ್ಯೋಗ ಕಳೆದುಕೊಂಡ ಇಎಸ್ಐಸಿ ಚಂದಾದಾರರಿಗೆ ಲಾಭವಾಗಲಿದೆ ಎಂದು ಇಎಸ್ಐಸಿ ಮಂಡಳಿ ಸದಸ್ಯ ಅಮರ್ಜೀತ್ ಕೌರ್ ಹೇಳಿದ್ದಾರೆ.
ಸಾಂಕ್ರಾಮಿಕದ ಸಂದರ್ಭದಲ್ಲಿ ಕೆಲಸ ಕಳೆದುಕೊಂಡ ಇಎಸ್ಐಸಿ ಚಂದಾದಾರು ಕೆಲ ನಿಬಂಧನೆಗಳ ಅಡಿಯಲ್ಲಿ ಮೂರು ತಿಂಗಳ ಸಂಬಳದಲ್ಲಿ 50 ಪ್ರತಿಶತ ನಿರುದ್ಯೋಗ ಭತ್ಯೆಯನ್ನು ಪಡೆಯುತ್ತಾರೆ ಎಂದು ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವ ಭೂಪೇಂದ್ರ ಯಾದವ್ ಹೇಳಿದರು.
ಇಎಸ್ಐಸಿ ವಿಮೆ ಮಾಡಿಸಿಕೊಂಡ ಅರ್ಹ ಕಾರ್ಮಿಕರು ಇಎಸ್ಐಸಿ ಶಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಆದರೆ ಇದಕ್ಕಾಗಿ ಅವರು ಹಳೆಯ ಸಂಸ್ಥೆಗೆ ಭೇಟಿ ನೀಡಬೇಕೆಂಬ ನಿಯಮವಿಲ್ಲ. ಅರ್ಹ ಚಂದಾದಾರರಿಗೆ ಹಣವು ಬ್ಯಾಂಕ್ ಖಾತೆಗೆ ಜಮೆ ಆಗಲಿದೆ.