ಚಿಕ್ಕ ಹುಡುಗಿಯೊಬ್ಬಳು ಬೀದಿಯಲ್ಲಿ ಕಲಾವಿದರೊಂದಿಗೆ ಪೂರ್ವಸಿದ್ಧತೆಯಿಲ್ಲದ ಸ್ಟೆಪ್ ಹಾಕುವ ವಿಡಿಯೋವೊಂದು ನೆಟ್ಟಿಗರು ತಲೆದೂಗುವಂತೆ ಮಾಡಿದೆ.
ಕರ್ನಾಟಕದ ಉಡುಪಿಯ ಜಾನಪದ ನೃತ್ಯ ಹುಲಿ ಕುಣಿತ ಪ್ರದರ್ಶಿಸುವ ಕೆಲವು ಕಲಾವಿದರೊಂದಿಗೆ 3 ರಿಂದ 4 ವರ್ಷ ಹುಡುಗಿಯೊಬ್ಬಳು ಸೇರಿಕೊಂಡು ಸದ್ದು ಮಾಡಿದ್ದಾಳೆ.
ವಿಡಿಯೋದಲ್ಲಿ ಮೊದಲು ಮಹಿಳೆಯೊಬ್ಬರು ಪುಟ್ಟ ಹುಡುಗಿಯ ಜೊತೆ ಕಾಣಿಸಿಕೊಳ್ಳುತ್ತಾರೆ, ಅವರು ಹುಲಿವೇಷ ಧಾರಿಗೆ ಹಾರ ಹಾಕಿ ಗೌರವಿಸುತ್ತಾರೆ. ನಂತರ ಆ ಕಲಾವಿದ ತನ್ನೊಂದಿಗೆ ನೃತ್ಯ ಮಾಡಲು ಪುಟ್ಟ ಬಾಲಕಿಯನ್ನು ಆಹ್ವಾನಿಸುತ್ತಾರೆ, ಕುಣಿಯುವಂತೆ ಪ್ರೋತ್ಸಾಹಿಸುತ್ತಾರೆ. ಕೆಲವು ಸೆಕೆಂಡುಗಳ ನಂತರ, ಹುಡುಗಿ ಆ ನೃತ್ಯಗಾರರನ್ನು ಅನುಕರಿಸಿ ಉತ್ಸಾಹದಿಂದ ಮೈ ಚಳಿ ಬಿಟ್ಟು ಬೀದಿಯಲ್ಲಿ ಕುಣಿಯುತ್ತಾಳೆ.
ಇದು ಕರಾವಳಿ ಕರ್ನಾಟಕದ ವಿಶಿಷ್ಟವಾದ ಜಾನಪದ ನೃತ್ಯವಾಗಿದೆ. ಇಲ್ಲಿ ಯುವಕರು ತಮ್ಮ ದೇಹವನ್ನು ಹಳದಿ ಮತ್ತು ಕಂದು ಬಣ್ಣದ ಪಟ್ಟೆಗಳಿಂದ ಚಿತ್ರಿಸುತ್ತಾರೆ, ಮುಖಕ್ಕೆ ಹುಲಿ ಮುಖವಾಡವನ್ನು ಧರಿಸುತ್ತಾರೆ ಮತ್ತು ಡ್ರಮ್ಗಳ ಬಡಿತಕ್ಕೆ ನೃತ್ಯ ಮಾಡುತ್ತಾರೆ. ಈ ರೀತಿ ವೇಷದ ನೃತ್ಯವನ್ನು ದಸರಾ ಮತ್ತು ಕೃಷ್ಣ ಜನ್ಮಾಷ್ಟಮಿ ಸಮಯದಲ್ಲಿ ನಡೆಸಲಾಗುತ್ತದೆ.
ಇದು ಕಳೆದ ವರ್ಷದ ವಿಡಿಯೋ ಆಗಿದ್ದು, ನೆಟ್ಟಿಗರು ಇದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ.