
ಕೊರೊನಾ ಕೇಸ್‌ಗಳು ಹೆಚ್ಚುತ್ತಿರುವ ಬೆನ್ನಿಗೇ ಜನರಲ್ಲಿ ಸಣ್ಣ ಪ್ರಮಾಣದ ಜ್ವರ, ಶೀತ, ಗಂಟಲು ಕೆರೆತ ಕಾಣಿಸಿಕೊಂಡರೂ ಸಹ ಭಯ ಉಂಟಾಗುತ್ತಿದೆ. ಇದು ಕೊರೊನಾ ಸೋಂಕು ತಗುಲಿರುವ ಲಕ್ಷಣವೇ ಎಂದು ಗಾಬರಿ ಆಗುತ್ತಿದೆ.
ಇಂಥ ಆತಂಕದಲ್ಲಿ ಜನರ ಸಮಾಧಾನಕ್ಕೆ ನೆರವಾಗಲು ಹಲವು ಕಂಪನಿಗಳು ಮನೆಯಲ್ಲೇ ಕುಳಿತು ಕೊರೊನಾ ಟೆಸ್ಟ್ ಮಾಡಬಹುದಾದ ವ್ಯವಸ್ಥೆ ಕಲ್ಪಿಸಿವೆ. ಕೊರೊನಾ ಟೆಸ್ಟ್ ಕಿಟ್‌ಗಳನ್ನು ಕೈಗೆಟಕುವ ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ಎಲ್ಲ ಟೆಸ್ಟ್ ಕಿಟ್‌ಗಳ ಗುಣಮಟ್ಟದ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅನುಮೋದನೆ ನೀಡಿದೆ.
ಅಂಥ ಗುಣಮಟ್ಟದ ಟೆಸ್ಟ್ ಕಿಟ್‌ಗಳ ಪಟ್ಟಿ ಇಲ್ಲಿದೆ.
1. ಮೈಲ್ಯಾಬ್ ಕೋವಿಸೆಲ್ಫ್

ಇದು ಕೇವಲ 250 ರೂ.ಗೆ ಲಭ್ಯವಿದೆ. 18 ವರ್ಷ ಮೇಲ್ಪಟ್ಟವರು ಒಂದು ಬಾರಿಗೆ ಇದನ್ನು ಬಳಸಬಹುದು. ಕಂಪನಿ ಆಪ್‌ನಲ್ಲಿ ನೋಂದಣಿ ಮಾಡಿಕೊಂಡು ಟೆಸ್ಟ್ ಮಾಡುವುದು ಕಡ್ಡಾಯವಿದೆ. ಯಾಕೆಂದರೆ ದಾಖಲೆಗಳನ್ನು ಅವರು ಸರಕಾರಕ್ಕೆ ಸಲ್ಲಿಸಬೇಕಿದೆ. ಆರು ತಿಂಗಳ ಎಕ್ಸ್‌ಪೈರಿ ಅವಧಿ ಈ ಟೆಸ್ಟ್ ಕಿಟ್‌ಗೆ ಇದೆ. ಖರೀದಿ ಮಾಡಿದ ಈ ಅವಧಿಯೊಳಗೆ ಟೆಸ್ಟ್ ಮಾಡಿದರೆ ಉತ್ತಮ.
2. ಪ್ಯಾನ್‌ಬಯೊ ಕೋವಿಡ್ ಆಂಟಿಜನ್ ಸೆಲ್ಫ್ ಟೆಸ್ಟ್

249 ರೂ.ಗೆ ಈ ಕಿಟ್ ಲಭ್ಯವಿದೆ. ಕೇವಲ 15 ನಿಮಿಷಗಳಲ್ಲಿ ನಿಮಗೆ ಕೊರೊನಾ ತಗುಲಿರುವ ಅಥವಾ ಸೋಂಕಿಲ್ಲದ ಬಗ್ಗೆ ಖಾತರಿಯನ್ನು ಇದು ನೀಡುತ್ತದೆ.
3. ಕೋವಿಫೈಂಡ್ ರ‍್ಯಾಪಿಡ್ ಆಂಟಿಜನ್ ಟೆಸ್ಟ್ ಕಿಟ್

ಎರಡು ವರ್ಷಕ್ಕೂ ಮೇಲ್ಪಟ್ಟ ಯಾರು ಬೇಕಾದರೂ ಈ ಟೆಸ್ಟ್ ಕಿಟ್ ಬಳಸಬಹುದು. ಇದರೊಳಗೆ, ಒಂದು ಟ್ಯೂಬ್, ಒಂದು ಮೂಗಿಗೆ ಹಾಕುವ ಸ್ವಾಬ್, ಒಂದು ಟೆಸ್ಟ್ ಸಾಧನ ಇರುತ್ತದೆ. ಟೆಸ್ಟ್ ಬಳಿಕ ಕಸಕ್ಕೆ ಸುರಕ್ಷಿತವಾಗಿ ಬಿಸಾಡಲು ಡಿಸ್ಪೊಸೆಬಲ್ ಬ್ಯಾಗ್ ಕೂಡ ಕೊಟ್ಟಿದ್ದಾರೆ. ಈ ಕಿಟ್‌ನ ಆನ್‌ಲೈನ್ ಮಾರಾಟದ ಬೆಲೆ 242 ರೂ. ಮಾತ್ರ.
4. ಅಲ್ಟ್ರಾ ಕೋವಿ-ಕ್ಯಾಚ್ ರ‍್ಯಾಪಿಡ್ ಆಂಟಿಜನ್ ಟೆಸ್ಟ್

ಫ್ಲಿಪ್‌ಕಾರ್ಟ್‌ನಲ್ಲಿ 275 ರೂ.ಗೆ ಈ ಟೆಸ್ಟ್ ಕಿಟ್ ಲಭ್ಯವಿದೆ. ಇದು ದೇಶದಲ್ಲಿ ಮೊದಲು ಮಾರುಕಟ್ಟೆಗೆ ಬಂದ ಕಿಟ್ ಆಗಿದೆ. 15 ನಿಮಿಷಗಳಲ್ಲಿ ಪರೀಕ್ಷೆಯ ವರದಿ ಸಿಗಲಿದೆ. ಕಂಟ್ರೋಲ್ ಲೈನ್ ಹಾಗೂ ಟೆಸ್ಟ್ ಲೈನ್ ಎಂಬ ಎರಡು ಗೆರೆಗಳು ಕಾಣಿಸಿಕೊಂಡರೆ ಕೊರೊನಾ ಪಾಸಿಟಿವ್ ಎಂದು ಅರ್ಥ. ಒಂದೇ ಗೆರೆ ಕಾಣಿಸಿಕೊಂಡರೆ ಕೊರೊನಾ ಸೋಂಕು ತಗುಲಿಲ್ಲ ಎಂದು ಅರ್ಥ.
5. ಆಂಗ್‌ಕಾರ್ಡ್ ಆಂಟಿಜನ್ ಟೆಸ್ಟ್ ಕಿಟ್

ಫ್ಲಿಪ್‌ಕಾರ್ಟ್‌ನಲ್ಲಿ ಆನ್‌ಲೈನ್ ಖರೀದಿಗೆ ಈ ಟೆಸ್ಟ್ ಕಿಟ್ 1,350 ರೂ.ಗೆ ಲಭ್ಯವಿದೆ. 25 ಜನರು ಈ ಕಿಟ್ ಬಳಸಲು, 25 ಮೂಗಿನ ಸ್ವಾಬ್‌ಗಳನ್ನು ಕೊಡಲಾಗಿದೆ. 15 ನಿಮಿಷಗಳಲ್ಲಿ ನಿಖರ ಫಲಿತಾಂಶ ಸಿಗಲಿದೆ.
ಬಹುಮುಖ್ಯವಾಗಿ ಟೆಸ್ಟ್ ಕಿಟ್ ಬಳಸುವ ಮುನ್ನ ಶುದ್ಧವಾದ ಗಾಳಿ, ಬೆಳಕು ಇರುವ ಸ್ಥಳದಲ್ಲಿ ಕೂರಬೇಕು. ಕೈಗಳನ್ನು ಸ್ವಚ್ಛಮಾಡಿಕೊಳ್ಳಬೇಕು. ಬಳಸುತ್ತಿರುವ ಟೆಸ್ಟ್ ಕಿಟ್ ಕಂಪನಿಯ ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಅದರಲ್ಲಿ ನಿಮ್ಮ ಹೆಸರು ಹಾಗೂ ಇತರ ಮಾಹಿತಿ ನೋಂದಣಿ ಮಾಡಿದ ಬಳಿಕವೇ ಟೆಸ್ಟ್ ಆರಂಭಿಸಬೇಕು.
ಒಂದು ವೇಳೆ ಟೆಸ್ಟ್‌ನಲ್ಲಿ ಪಾಸಿವಿಟಿವ್ ಬಂದರೆ ಗಾಬರಿ ಆಗದೆಯೇ ಹತ್ತಿರದ ಸರಕಾರಿ ಅಥವಾ ಖಾಸಗಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ವೈದ್ಯಕೀಯ ಸಲಹೆ ಪಡೆಯುವುದು ಮೊದಲ ಆದ್ಯತೆ ಆಗಿರಲಿ.