ಕೋವಿಡ್ 19 ನಿಯಂತ್ರಣಕ್ಕೆ ತರುವ ಸಲುವಾಗಿ ಆಂಧ್ರ ಪ್ರದೇಶದಲ್ಲಿ ಭಾಗಶಃ ಲಾಕ್ಡೌನ್ ಹೇರಿಕೆ ಮಾಡಿದ ಬಳಿಕ ಮದ್ಯ ಮಾರಾಟದಲ್ಲಿ ಭಾರೀ ಕುಸಿತ ಕಂಡುಬಂದಿದೆ ಎಂದು ವರದಿಯಾಗಿದೆ.
ಏಪ್ರಿಲ್ಗೆ ಹೋಲಿಕೆ ಮಾಡಿದ್ರೆ ಮೇ ತಿಂಗಳಲ್ಲಿ ಮದ್ಯ ಮಾರಾಟದಲ್ಲಿ 9.74 ಪ್ರತಿಶತ ಕುಸಿತ ಕಂಡು ಬಂದಿದೆ. ಏಪ್ರಿಲ್ ತಿಂಗಳಲ್ಲಿ ಇದ್ದಂತೆಯೇ ಮೇ ತಿಂಗಳಿನಲ್ಲೂ ಲಿಕ್ಕರ್ ಶಾಪ್ಗಳು, ಬಾರ್ ಹಾಗೂ ರೆಸ್ಟಾರೆಂಟ್ಗಳಲ್ಲಿ ಆರು ಗಂಟೆಗಳ ಕಾಲ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೂ ಸಹ ಮೇ ತಿಂಗಳಲ್ಲಿ ಮದ್ಯ ಮಾರಾಟದಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದೆ.
ಬಾರ್ಗಳು ಹಾಗೂ ರೆಸ್ಟಾರೆಂಟ್ಗಳಲ್ಲಿನ ಮಂದಗತಿಯ ವ್ಯಾಪಾರದಿಂದಾಗಿ ಆರ್ಥಿಕ ಸ್ಥಿತಿ ಕುಂಠಿತವಾಗಲಿದೆ ಅನ್ನೋದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಭಾಗಶಃ ಲಾಕ್ಡೌನ್ ಜಾರಿಗೆ ತಂದಾಗಲೇ ಮದ್ಯಮಾರಾಟದ ಉದ್ಯಮದಲ್ಲಿ ಕುಂಠಿತವಾಗಬಹುದು ಎಂದು ಅಂದಾಜಿಸಲಾಗಿತ್ತು. ಕೋವಿಡ್ ಹರಡುವ ಭಯ ಒಂದು ಕಾರಣವಾದ್ರೆ ಮದ್ಯವನ್ನ ಖರೀದಿ ಮಾಡಲು ಗ್ರಾಹಕರು ಸಂಜೆ ಸಮಯವನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ತಾರೆ.
ಆದರೆ ಈಗ ಬೆಳಗಿನ ಜಾವ ಮಾತ್ರ ಬಾರ್ಗಳು ತೆರೆದಿರೋದ್ರಿಂದ ಬೆಳಗ್ಗೆ ಹೊತ್ತು ಬಾರ್ ಕಡೆ ಮುಖ ಮಾಡುವವರ ಸಂಖ್ಯೆ ತುಂಬಾನೇ ಕಡಿಮೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ಆಂಧ್ರಪ್ರದೇಶದಲ್ಲಿ 1863.35 ಕೋಟಿ ರೂ. ಮದ್ಯ ಮಾರಾಟವಾಗಿದ್ದರೆ ಮೇ ತಿಂಗಳಲ್ಲಿ 1686.32 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ.