ಶ್ರೀನಗರದ ನಾತಿಪೋರಾ ಏರಿಯಾದಲ್ಲಿ ಭಾನುವಾರ ಜನನಿಬಿಡ ಪ್ರದೇಶದಲ್ಲೇ ಚಿರತೆಯೊಂದು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಎರಡು ವಾರದ ಹಿಂದೆಯಷ್ಟೇ ಅಪ್ರಾಪ್ತ ಬಾಲಕಿಯ ಮೇಲೆ ಚಿರತೆಯೊಂದು ದಾಳಿ ನಡೆಸಿದ್ದು, ಈ ಬಳಿಕ ಇದನ್ನ ನರಹಂತಕ ಚಿರತೆ ಎಂದು ಕರೆಯಲಾಗಿತ್ತು.
ಈ ಚಿರತೆಯನ್ನ ಸೆರೆಹಿಡಿಯುವ ಸಲುವಾಗಿ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ. ಯಾವುದೇ ಪ್ರಾಣ ಹಾನಿ ಸಂಭವಿಸೋದಕ್ಕೂ ಮುನ್ನವೇ ಚಿರತೆಯನ್ನ ಸೆರೆಹಿಡಿಯಬೇಕೆಂದು ಈಗಾಗಲೇ ನಾತಿಪೋರಾ ಪ್ರದೇಶದಲ್ಲಿ ವನ್ಯಜೀವಿ ವಿಭಾಗದ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ.
ಚಿರತೆಯನ್ನ ನಾವು ನಿನ್ನೆ ರಾತ್ರಿ 10 ಗಂಟೆಗೆ ಸುಮಾರಿಗೆ ನೋಡಿದ್ದು ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದೇವೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಚಿರತೆಯನ್ನ ಸೆರೆ ಹಿಡಿಯುವವರೆಗೂ ಅನಗತ್ಯವಾಗಿ ಮನೆಯಿಂದ ಹೊರಬಾರದಂತೆ ಸ್ಥಳೀಯ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ.
ಧ್ವನಿವರ್ಧಕಗಳ ಸಹಾಯದಿಂದ ಸ್ಥಳೀಯ ನಿವಾಸಿಗಳು ಚಿರತೆ ಪ್ರತ್ಯಕ್ಷವಾಗಿರೋದ್ರ ಬಗ್ಗೆ ಜನತೆಗೆ ಮಾಹಿತಿಯನ್ನ ತಲುಪಿಸುತ್ತಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಕಾಶ್ಮೀರದ ವನ್ಯಜೀವಿ ವಾರ್ಡನ್ ರಶೀದ್ ನಖಾಶ್, ಈ ಪ್ರದೇಶದಲ್ಲಿ ನಮ್ಮ ತಂಡವನ್ನ ನಿಯೋಜಿಸಿದ್ದೇವೆ. ಚಿರತೆಯನ್ನ ಸೆರೆಹಿಡಿಯಲು ಎಲ್ಲಾ ರೀತಿಯ ಪ್ರಯತ್ನಗಳನ್ನ ಮಾಡಲಾಗ್ತಿದೆ ಎಂದು ಮಾಹಿತಿ ನೀಡಿದ್ದಾರೆ.