
ಕುಖ್ಯಾತ ಭಯೋತ್ಪಾದಕ ಗುಂಪಾದ ಲಷ್ಕರ್ -ಎ – ತೊಯ್ಬಾ ಡ್ರೋನ್ಗಳ ಮೂಲಕ ಭಯೋತ್ಪಾದಕರನ್ನು ಭಾರತದ ಒಳಗೆ ಇಳಿಸುವ ಕಾರ್ಯಾಚರಣೆ ನಡೆಸುತ್ತಿದೆ ಎನ್ನಲಾಗಿದೆ. ಈ ಡ್ರೋನ್ಗಳು 70 ಕೆಜಿವರೆಗೆ ಪೇಲೋಡ್ಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿವೆ ಎಂದು ತಿಳಿದು ಬಂದಿದೆ.
ಪಂಜಾಬ್ ಹಾಗೂ ಜಮ್ಮು & ಕಾಶ್ಮೀರದ ಗಡಿಯಲ್ಲಿ ಶೂಟ್ ಮಾಡಲಾದ ವಿಡಿಯೋದಲ್ಲಿ ಭಯೋತ್ಪಾದಕರು ಡ್ರೋನ್ಗಳ ಸಾಮರ್ಥ್ಯ ಪರೀಕ್ಷೆ ಮಾಡುತ್ತಿರೋದು ಹಾಗೂ ಮನುಷ್ಯರನ್ನು ಡ್ರೋನ್ಗಳ ಮೇಲೆ ಕೂರಿಸಿ ಅವರನ್ನ ನೀರಿನಲ್ಲಿ ಬಿಡುತ್ತಿರೋದನ್ನ ಕಾಣಬಹುದಾಗಿದೆ. ಗುಪ್ತಚರ ಮೂಲಗಳ ಪ್ರಕಾರ, ಕಳೆದ ತಿಂಗಳು ಇದೇ ಡ್ರೋನ್ಗಳನ್ನು ಬಳಕೆ ಮಾಡಿ ಭಯೋತ್ಪಾದಕರನ್ನು ಪಂಜಾಬ್ಗೆ ಕಳುಹಿಸಲಾಗಿದೆ ಎನ್ನಲಾಗಿದೆ.
ಪ್ರಸ್ತುತ ಪಾಕಿಸ್ತಾನದಲ್ಲಿ ನೆಲೆಗೊಂಡಿರುವ ಈ ಭಯೋತ್ಪಾದಕ ಗುಂಪು ಮಾದಕ ವಸ್ತುಗಳು, ಶಸ್ತ್ರಾಸ್ತ್ರಗಳು ಹಾಗೂ ನಾರ್ಕೋ ಸರಕುಗಳನ್ನು ಜಮ್ಮು & ಕಾಶ್ಮೀರ ಹಾಗೂ ಪಂಜಾಬ್ಗೆ ಡ್ರೋನ್ ಮೂಲಕ ಸಾಗಿಸುತ್ತಿದೆ. ರಾಜಸ್ಥಾನ ಹಾಗೂ ಗುಜರಾತ್ ಗಡಿಗಳನ್ನು ಬಳಕೆ ಮಾಡಿಕೊಂಡು ರಸ್ತೆ ಮಾರ್ಗದ ಮೂಲಕ ಪಂಜಾಬ್ಗೆ ಈ ಸರಕುಗಳನ್ನು ಕಳ್ಳಸಾಗಣೆ ಮಾಡುತ್ತಿದೆ ಎಂದು ವರದಿಯಾಗಿದೆ.