alex Certify ಲಖೀಂಪುರ ಖೇರಿ ಹಿಂಸಾಚಾರ: ಬಿಜೆಪಿ ಕಾರ್ಯಕರ್ತರ ಹತ್ಯೆ ಪ್ರಕರಣದಲ್ಲಿ ಮತ್ತೊಬ್ಬ ರೈತ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಖೀಂಪುರ ಖೇರಿ ಹಿಂಸಾಚಾರ: ಬಿಜೆಪಿ ಕಾರ್ಯಕರ್ತರ ಹತ್ಯೆ ಪ್ರಕರಣದಲ್ಲಿ ಮತ್ತೊಬ್ಬ ರೈತ ಅರೆಸ್ಟ್

ನವದೆಹಲಿ: ಕಳೆದ ವರ್ಷ ಅಕ್ಟೋಬರ್ 3 ರಂದು ಲಖೀಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಮೂವರು ಬಿಜೆಪಿ ಕಾರ್ಯಕರ್ತರನ್ನು ಹತ್ಯೆಗೈದ ಆರೋಪಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(ಎಸ್‌ಐಟಿ) ಮತ್ತೊಬ್ಬ ರೈತನನ್ನು ಬಂಧಿಸಿದೆ.

ಸುಮಾರು ಎರಡು ತಿಂಗಳ ಹಿಂದೆ ಎಸ್‌ಐಟಿ ಶಂಕಿತರ ಚಿತ್ರಗಳನ್ನು ಬಿಡುಗಡೆ ಮಾಡಿದ ನಂತರ ಗುರುಪ್ರೀತ್ ಸಿಂಗ್(22) ತಲೆಮರೆಸಿಕೊಂಡಿದ್ದ ಎಂದು ಲಖಿಂಪುರ ಖೇರಿ ಪೊಲೀಸ್ ಮತ್ತು ಹಿರಿಯ ಪ್ರಾಸಿಕ್ಯೂಷನ್ ಅಧಿಕಾರಿ  ಎಸ್‌ಪಿ ಯಾದವ್ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 7 ರೈತರನ್ನು ಬಂಧಿಸಲಾಗಿದೆ. ಈ ಹಿಂದೆ ವಿಚಿತ್ರಾ ಸಿಂಗ್, ಗುರ್ವಿಂದರ್ ಸಿಂಗ್, ಅವತಾರ್ ಸಿಂಗ್, ರಂಜೀತ್ ಸಿಂಗ್, ಕಮಲ್ಜೀತ್ ಸಿಂಗ್ ಮತ್ತು ಕವಲ್ಜೀತ್ ಸಿಂಗ್ ಅವರನ್ನು ಶಂಕಿತರೆಂದು ಗುರುತಿಸಿದ ನಂತರ ಎಸ್‌ಐಟಿ ಬಂಧಿಸಿತ್ತು.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರೊಂದಿಗೆ ಸಹ-ಆರೋಪಿಯಾಗಿರುವ ಬಿಜೆಪಿ ಕಾರ್ಯಕರ್ತ ಸುಮಿತ್ ಜೈಸ್ವಾಲ್ ದೂರಿನ ಆಧಾರದ ಮೇಲೆ ‘ಅಪರಿಚಿತ ರೈತರ’ ವಿರುದ್ಧ ಕೊಲೆ ಮತ್ತು ಗಲಭೆ ಆರೋಪಗಳೊಂದಿಗೆ ಆರಂಭದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಹಿಂಸಾಚಾರದ ಸಮಯದಲ್ಲಿ ನಾಲ್ವರು ರೈತರು ಮತ್ತು ಪತ್ರಕರ್ತ ಸಾವು ಕಂಡಿದ್ದರು. ಸುಮಿತ್ ದಾಖಲಿಸಿದ ಎಫ್‌ಐಆರ್‌ನಲ್ಲಿ ಆಶಿಶ್ ಬೆಂಗಾವಲು ಪಡೆಯಿಂದ ಹತ್ಯೆಗೀಡಾದ ರೈತರು ಮತ್ತು ಪತ್ರಕರ್ತರ ಸಾವಿನ ಬಗ್ಗೆ ಉಲ್ಲೇಖಿಸಲಾಗಿಲ್ಲ.

ಆಶಿಶ್ ಮತ್ತು ಇತರರ ವಿರುದ್ಧ ರೈತರು ನೀಡಿದ ದೂರಿನ ಆಧಾರದ ಮೇಲೆ ಹಿಂಸಾಚಾರಕ್ಕೆ ಸಂಬಂಧಿಸಿದ ಮೊದಲ ಎಫ್‌ಐಆರ್ ಅನ್ನು ಪೊಲೀಸರು ದಾಖಲಿಸಿದ್ದಾರೆ. ಆ ಪ್ರಕರಣದಲ್ಲಿ 13 ಮಂದಿಯನ್ನು ಬಂಧಿಸಿರುವ ಎಸ್‌ಐಟಿ ಘಟನೆಯನ್ನು ‘ಯೋಜಿತ’(planned) ಎಂದು ಬಣ್ಣಿಸಿದೆ.

ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಎಸ್‌ಐಟಿಯನ್ನು ಪುನರ್‌ ರಚಿಸಿ ಹೊಸ ಸದಸ್ಯರನ್ನು ಸೇರಿಸಿತ್ತು, ಐಪಿಎಸ್ ಅಧಿಕಾರಿಗಳಾದ ಎಸ್.ಬಿ. ಶಿರಾಡ್ಕರ್, ಪ್ರೀತಿಂದರ್ ಸಿಂಗ್ ಮತ್ತು ಪದ್ಮಜಾ ಚೌಹಾಣ್, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ರಾಕೇಶ್ ಕುಮಾರ್ ಜೈನ್ ಅವರೊಂದಿಗೆ ಲಖೀಂಪುರ ಖೇರಿ ಹಿಂಸಾಚಾರದ ತನಿಖೆ ನಡೆಸುತ್ತಿದ್ದಾರೆ.

ತನಿಖೆಗೆ 90 ದಿನಗಳ ಗಡುವು ಮಂಗಳವಾರ ಕೊನೆಗೊಳ್ಳಲಿರುವುದರಿಂದ ಎಸ್‌ಐಟಿ ಇನ್ನೆರಡು ದಿನಗಳಲ್ಲಿ ಎರಡೂ ಪ್ರಕರಣಗಳ ಆರೋಪಪಟ್ಟಿ ಸಲ್ಲಿಸುವ ನಿರೀಕ್ಷೆಯಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...