ಬಿಜೆಪಿಯಲ್ಲಿ ಉಂಟಾಗಿರುವ ಆಂತರಿಕ ಬಿಕ್ಕಟ್ಟು ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಮತ ಶಮನಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಿರುದ್ಧ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.
ಕೆ.ಆರ್. ಪೇಟೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳು ರಾಜ್ಯದ ಸಂಪತ್ತು ಲೂಟಿ ಮಾಡುತ್ತಿವೆ. ಬಿಜೆಪಿ ವರಿಷ್ಠರು ಉಸ್ತುವಾರಿಯನ್ನ ನೇಮಿಸಿರೋದು ಸಮಸ್ಯೆ ನಿವಾರಣೆಗೆ ಅಲ್ಲ. ಅರುಣ್ ಸಿಂಗ್ಗೂ ಈ ಸಮಸ್ಯೆ ಬಗೆಹರಿಯೋದು ಬೇಕಾಗಿಯೂ ಇಲ್ಲ. ಈ ಎಲ್ಲದರ ಬಗ್ಗೆ ರಾಜ್ಯದ ಜನತೆ ಆದಷ್ಟು ಬೇಗ ಎಚ್ಚೆತ್ತುಕೊಳ್ಳಬೇಕಿದೆ ಎಂದು ಎಚ್ಚರಿಕೆ ನೀಡಿದ್ರು.
ಇದೇ ವೇಳೆ ಬಿಎಸ್ವೈ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ ಹೆಚ್. ವಿಶ್ವನಾಥ್ ವಿರುದ್ಧವೂ ಮಾತನಾಡಿದ ಹೆಚ್ಡಿಕೆ, ಜೆಡಿಎಸ್ ಪಕ್ಷಕ್ಕೆ ವಿಶ್ವನಾಥ್ ಕುಟುಂಬ ರಾಜಕಾರಣ ಎಂದು ಕರೆದರು. ಜೆಡಿಎಸ್ ಪಕ್ಷ ಸೇರುವ ಮುನ್ನ ಅವರಿಗೆ ಈ ವಿಚಾರ ಗೊತ್ತಿರಲಿಲ್ವಾ..? ವಿಶ್ವನಾಥ್ ಪುತ್ರ ಕೂಡ ಜಿಲ್ಲಾ ಪಂಚಾಯತ್ ಸದಸ್ಯ. ಅವರ ಕುಟುಂಬವೂ ರಾಜಕಾರಣದಲ್ಲಿ ಸಕ್ರಿಯವಾಗಿದೆ. ಹಾಗಾದರೆ ಅವರದ್ದು ಕುಟುಂಬ ರಾಜಕಾರಣ ಅಲ್ಲವಾ..? ಬಿ.ಎಸ್. ಯಡಿಯೂರಪ್ಪಗೆ ವಯಸ್ಸಾಯ್ತು ಅಂತಾ ಹೇಳುತ್ತಾರೆ. ಬಿಜೆಪಿ ಸೇರುವ ಮುನ್ನ ಬಿಎಸ್ವೈ ವಯಸ್ಸು ವಿಶ್ವನಾಥ್ಗೆ ತಿಳಿದಿರಲಿಲ್ಲವಾ..? ಅಧಿಕಾರ ಸಿಗದೇ ಇದ್ದಾಗ ಬೈಕೊಂಡು ಓಡಾಡೋದು ವಿಶ್ವನಾಥ್ರ ಬುದ್ಧಿ ಎಂದು ಕಿಡಿಕಾರಿದ್ರು.