ಕ್ಯಾನ್ಸರ್ ವಿರುದ್ಧ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ಹಿರಿಯ ನಟಿ ಹಾಗೂ ರಾಜಕಾರಣಿ ಕಿರಣ್ ಖೇರ್ ಇಂಡಿಯಾಸ್ ಗಾಟ್ ಟ್ಯಾಲೆಂಟ್ ಕಾರ್ಯಕ್ರಮದ ಹೊಸ ಆವೃತ್ತಿಗೆ ತೀರ್ಪುಗಾರರಾಗಿ ಮರಳಿದ್ದಾರೆ. ಕಿರಣ್ಗೆ ಈ ವರ್ಷದ ಆರಂಭದಲ್ಲಿ ಮಲ್ಟಿಪಲ್ ಮೈಲೋಮಾ ಎಂದು ಕರೆಯಲ್ಪಡುವ ರಕ್ತದ ಕ್ಯಾನ್ಸರ್ ಇರುವ ವಿಚಾರ ಬೆಳಕಿಗೆ ಬಂದಿತ್ತು.
ಇದಾದ ಬಳಿಕ ಕ್ಯಾನ್ಸರ್ ವಿರುದ್ಧ ಹೋರಾಟ ಆರಂಭಿಸಿದ ನಟಿ ಕಿರಣ್ ಖೇರ್ ಮನೆಯಲ್ಲಿಯೇ ಇದ್ದರು. ಆದರೆ ಇದೀಗ ಹೊಸ ಆವೃತ್ತಿಯ ಇಂಡಿಯಾಸ್ ಗಾಟ್ ಟಾಲೆಂಟ್ಗೆ ಕಿರಣ್ ಖೇರ್ ವಾಪಸ್ ಮರಳಿದ್ದಾರೆ. ಇಂಡಿಯಾಸ್ ಗಾಟ್ ಟ್ಯಾಲೆಂಟ್ ಕಾರ್ಯಕ್ರಮದ ಸೀಸನ್ 1ರಿಂದಲೂ ಕಿರಣ್ ಖೇರ್ ತೀರ್ಪುಗಾರರಾಗಿ ಕೆಲಸ ಮಾಡಿದ್ದಾರೆ.
ಕಿರಣ್ ಖೇರ್ ಜೊತೆಗೆ ಬಾದ್ಶಾ ಹಾಗೂ ನಟಿ ಶಿಲ್ಪಾ ಶೆಟ್ಟಿ ಕೂಡ ತೀರ್ಪುಗಾರರಾಗಿ ಇರಲಿದ್ದಾರೆ. ಶೂಟಿಂಗ್ ನಡುವೆ ಸಣ್ಣ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ, ಕಿರಣ್ ಖೇರ್ ಹಾಗೂ ಬಾದ್ ಶಾ ಜೊತೆಗೆ ಮೊದಲ ಪ್ರದರ್ಶನ ಎಂದು ಶೀರ್ಷಿಕೆ ನೀಡಿದ್ದಾರೆ.
ಈ ವಿಡಿಯೋದಲ್ಲಿ ನಟಿ ಶಿಲ್ಪಾ ಶೆಟ್ಟಿ, ಕಿರಣ್ ಖೇರ್ ಜೊತೆಗೆ ತಮಾಷೆಯ ಸಂಭಾಷಣೆ ನಡೆಸಿದ್ದು ನನ್ನನ್ನು ದತ್ತು ಪಡೆಯಿರಿ ಎಂದು ಕಿರಣ್ ಖೇರ್ ಬಳಿ ಕೇಳಿದ್ದಾರೆ. ನಾನು ಶೂಟಿಂಗ್ಗೆ ಕಿರಣ್ ಖೇರ್ ಅವರ ಆಭರಣಗಳನ್ನು ನೋಡಲೆಂದೇ ಬರುತ್ತೇನೆ ಎಂದು ಹೇಳಿದ್ದಾರೆ.
ಇದಕ್ಕೆ ನಕ್ಕು ಪ್ರತಿಕ್ರಿಯಿಸಿದ ಕಿರಣ್ ಖೇರ್, ತಮಾಷೆ ಮಾಡಬೇಡ ಎಂದಿದ್ದಾರೆ. ಪ್ರತಿಯಾಗಿ ಶಿಲ್ಪಾ ಶೆಟ್ಟಿ, ನೀವು ನನ್ನನ್ನು ದತ್ತು ಪಡೆದುಕೊಂಡುಬಿಡಿ. ಸಿಖಂದರ್( ಕಿರಣ್ ಖೇರ್ – ಅನುಪಮ್ ಖೇರ್ ದಂಪತಿಯ ಪುತ್ರ) ಇದನ್ನೆಲ್ಲ ಧರಿಸೋಕೆ ಸಾಧ್ಯವಿಲ್ಲ. ಹೀಗಾಗಿ ನನ್ನನ್ನು ದತ್ತು ಪಡೆಯಿರಿ. ಸಿಖಂದರ್ ನಿಮ್ಮ ಆಭರಣ ಧರಿಸೋದಿಲ್ಲ ಎಂದು ಹೇಳಿದ್ದಾರೆ.
ಇದಕ್ಕೂ ನಗುತ್ತಲೇ ಉತ್ತರಿಸಿದ ಕಿರಣ್ ಖೇರ್, ಅವನಿಗೆ ಹಾಕಬೇಕು ಅನಿಸಿದರೆ ಬಹುಶಃ ಅವನು ಈ ಆಭರಣಗಳನ್ನು ಧರಿಸಬಹುದು. ಒಂದು ದಿನ ನಾನು ಆತನ ಬಳಿ ನೀನಂತೂ ಮದುವೆಯಾಗುತ್ತಿಲ್ಲ. ಹೀಗಾಗಿ ನಾನು ಈ ಆಭರಣಗಳನ್ನು ಮಾರುತ್ತೇನೆ ಎಂದು ಹೇಳಿದ್ದೆ. ಅದಕ್ಕೆ ಸಿಖಂದರ್, ಆ ರೀತಿ ಮಾಡಬೇಡ. ಇದನ್ನೆಲ್ಲ ನನ್ನ ಪತ್ನಿ ಧರಿಸುತ್ತಾಳೆ ಎಂದಿದ್ದ ಅಂತಾ ಹೇಳುವ ಮೂಲಕ ನಗೆಗಡಲಿನಲ್ಲಿ ತೇಲಿದ್ರು.