ಪ್ರೀತಿಪಾತ್ರರಿಗೆ ಕೈಯಿಂದ ಕೇವಲ 10 ಸಾಲು ಪತ್ರ ಬರೆಯುವುದು ನಮ್ಮಲ್ಲಿ ಹೆಚ್ಚಿನವರಿಗೆ ಕಷ್ಟದ ಕೆಲಸ. ಆದರೆ, ಕೇರಳದ ಕೃಷ್ಣಪ್ರಿಯಾ ಎಂಬ ಮಹಿಳೆ ತನ್ನ ಸಹೋದರನಿಗೆ 434 ಮೀಟರ್ ಉದ್ದದ ಪತ್ರವನ್ನು ಬರೆದಿದ್ದಾರೆ.
ಈ ಪತ್ರ ಅವರಿಬ್ಬರ ನಡುವಿನ ಬಾಂಧವ್ಯದ ತೀವ್ರತೆ ತೋರುತ್ತದಲ್ಲದೇ, ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಆಕೆ ಸ್ಥಾನ ಗಳಿಸಬಹುದು. ವಿಶ್ವ ಸಹೋದರರ ದಿನದಂದು ಕೇರಳದ ಇಡುಕ್ಕಿ ಜಿಲ್ಲೆಯ ಪೀರ್ಮಡೆಯ ಇಂಜಿನಿಯರ್ ಕೃಷ್ಣಪ್ರಿಯಾ ತನ್ನ ಕಿರಿಯ ಸಹೋದರನೊಂದಿಗೆ ಇರಲು ಸಾಧ್ಯವಾಗಿರಲಿಲ್ಲ. ತನ್ನ ತೀವ್ರವಾದ ಕೆಲಸದ ವೇಳಾಪಟ್ಟಿಯಿಂದಾಗಿ ಆಕೆ ಅವನನ್ನು ಖುದ್ದಾಗಿ ಹಾರೈಸುವುದನ್ನು ಸಹ ತಪ್ಪಿಸಿಕೊಂಡಿದ್ದಳು.
ಆಕೆಯ 21 ವರ್ಷದ ಸಹೋದರ ಕೃಷ್ಣಪ್ರಸಾದ್ ನಿರಾಸೆಗೊಂಡು ವಾಟ್ಸಾಪ್ನಲ್ಲಿ ಮೆಸೇಜ್ ಮಾಡಿದ್ದ ಮತ್ತು ಆ ದಿನವನ್ನು ನೆನಪಿಸಿದ್ದ. ಆದರೆ, ಕೃಷ್ಣಪ್ರಿಯಾ ಬಹಳ ಸಮಯದವರೆಗೆ ಆ ಮೆಸೇಜ್ ನೋಡಿರಲಿಲ್ಲ, ಇದು ಅವಳ ಸಹೋದರನಿಗೆ ಇನ್ನಷ್ಟು ನೋಯಿಸಿತ್ತು. ಅಷ್ಟೇ ಅಲ್ಲದೇ, ಆತ ಆಕೆಯನ್ನು ವಾಟ್ಸಾಪ್ನಲ್ಲಿ ಬ್ಲಾಕ್ ಮಾಡಿ ಕರೆಯನ್ನೂ ಸ್ವೀಕರಿಸಿರಲಿಲ್ಲ.
ನಂತರ ಆಕೆ ತನ್ನ ಸಹೋದರನಿಗೆ ಕೈಬರಹದ ಪತ್ರವನ್ನು ಕಳುಹಿಸುವ ಮೂಲಕ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲು ನಿರ್ಧರಿಸಿದಳು. ಈ ಪತ್ರದಲ್ಲಿ ತನ್ನ ಹೃದಯಾಂತರಾಳದ ಮಾತುಗಳನ್ನು ಬರೆಯಲು ತನಗೆ ಎ4 ಗಾತ್ರದ ಕಾಗದಕ್ಕಿಂತ ಹೆಚ್ಚು ಅಗತ್ಯವಿದೆ ಎಂದು ಅರಿತ ಕೃಷ್ಣ ಪ್ರಿಯಾ, 15 ಬಿಲ್ಲಿಂಗ್ ಪೇಪರ್ ಖರೀದಿಸಿ ಪ್ರತಿಯೊಂದರ ಮೇಲೆ ಬರೆಯುತ್ತಾ ಹೋದಳು. ಪತ್ರವನ್ನು 12 ಗಂಟೆಗಳಲ್ಲಿ ಪೂರ್ಣಗೊಳಿಸಲಾಯಿತು, ನಂತರ ಪೆಟ್ಟಿಗೆಯಲ್ಲಿ ಪ್ಯಾಕ್ ಮಾಡಿದ್ದು, ಆ ಬಾಕ್ಸ್ 5.27 ಕಿಲೋಗ್ರಾಂಗಳಷ್ಟು ತೂಕವಿತ್ತು. ಪತ್ರದ ಒಟ್ಟು ಉದ್ದ 434 ಮೀಟರ್ಗಳಾಗಿತ್ತು !
ನನ್ನ ತೀವ್ರವಾದ ಕೆಲಸದ ವೇಳಾಪಟ್ಟಿಯಿಂದಾಗಿ ನಾನು ಹಾರೈಸುವುದನ್ನು ಮರೆತಿದ್ದೆ. ನಾವು ತಾಯಿ ಮತ್ತು ಮಗನಿದ್ದಂತೆ. ಆತ ನನ್ನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ, ಅದು ನನಗೆ ಬೇಸರ ತರಿಸಿತ್ತು. ಹೀಗಾಗಿ ದೀರ್ಘ ಪತ್ರ ಬರೆದೆ ಎಂದು ಕೃಷ್ಣಪ್ರಿಯಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.