ಪ್ರಿಯತಮೆ ಸಜಿತಾಳನ್ನು ಬರೋಬ್ಬರಿ 10 ವರ್ಷಗಳ ಕಾಲ ಕೋಣೆಯಲ್ಲಿ ಅಡಗಿಸಿಟ್ಟು ಸುದ್ದಿಯಾಗಿದ್ದ ರೆಹಮಾನ್ ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ನೆನ್ಮಾರ ವಿವಾಹ ನೋಂದಣಿ ಕಚೇರಿಯಲ್ಲಿ ವಿವಾಹವಾಗಿದ್ದಾನೆ.
ಸಜಿತಾ ಅತ್ಯಂತ ಸರಳವಾದ ಸಲ್ವಾರ್ ಧರಿಸಿದ್ದರೆ, ರೆಹಮಾನ್ ಪಂಚೆ ಹಾಗೂ ಶರ್ಟ್ ಧರಿಸಿದ್ದರು. ರೆಹಮಾನ್ ಜೊತೆಯಲ್ಲಿ ಮದುವೆಗೆ ಸಹಿ ಹಾಕುವ ವೇಳೆಯಲ್ಲಿ ಸಜಿತಾ ಖುಷಿಯಲ್ಲೇ ಇದ್ದಂತೆ ಕಂಡುಬಂತು. ಸಿಹಿ ಹಂಚಿದ ದಂಪತಿ ತಮ್ಮ ಮದುವೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಇಂದಿನಿಂದ ನಾವು ಸಂತೋಷವಾಗಿ ಹಾಗೂ ಶಾಂತಿಯುತ ಜೀವನವನ್ನು ನಡೆಸಲು ಇಚ್ಛಿಸುತ್ತೇವೆ ಎಂದು ರೆಹಮಾನ್ ಹೇಳಿದ್ದಾರೆ. ಸಜಿತಾ ಪೋಷಕರು ಕೂಡ ಈ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದರು. ಆದರೆ ಈ ಮದುವೆಗೆ ವಿರೋಧ ವ್ಯಕ್ತಪಡಿಸಿರುವ ರೆಹಮಾನ್ ಪೋಷಕರು ಕಾರ್ಯಕ್ರಮಕ್ಕೆ ಗೈರಾಗಿದ್ದರು.
ಮದುವೆಯಲ್ಲಿ ಭಾಗಿಯಾಗಿದ್ದ ನೆನ್ಮಾರಾ ಶಾಸಕ ಕೆ. ಬಾಬು ಈ ವಿಚಾರವಾಗಿ ಮಾತನಾಡಿದ್ದು ಸ್ವಂತ ಮನೆಯನ್ನು ಕಟ್ಟಿಕೊಳ್ಳಬೇಕೆಂಬ ಈ ದಂಪತಿಯ ಕನಸಿಗೆ ಎಲ್ಲಾ ರೀತಿಯ ಸಹಕಾರ ಸಿಗಲಿದೆ ಎಂದು ಹೇಳಿದರು.
ಆಯಿಯೂರು ಗ್ರಾಮದ ನಿವಾಸಿಯಾದ ಈ ದಂಪತಿ ಈಗ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಆದರೆ ಇದಕ್ಕೂ ಮುನ್ನ ದಶಕಗಳ ಕಾಲ ಸಜಿತಾ ಒಂದು ಸಣ್ಣ ಕೋಣೆಯಲ್ಲಿ ಅವಿತಿದ್ದರು. ಕೆಲ ತಿಂಗಳ ಹಿಂದಷ್ಟೇ ಇವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಮಹಿಳೆಯನ್ನು ಕೋಣೆಯಲ್ಲಿ ಕೂಡಿಡುವುದು ಕಾನೂನಿಗೆ ವಿರುದ್ಧವಾಗಿರೋದ್ರಿಂದ ಕೇರಳ ಪೊಲೀಸರು ರೆಹಮಾನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮಹಿಳೆಯನ್ನು ಕೂಡಿಟ್ಟಿದ್ದ ಕೋಣೆಯಲ್ಲಿ ಸ್ನಾನಗೃಹದ ಸೌಕರ್ಯ ಇರಲಿಲ್ಲ. ರಾತ್ರಿ ವೇಳೆ ಕಿಟಕಿ ಮೂಲಕ ಸಜಿತಾ ಹೊರಬರುತ್ತಿದ್ದರು ಎನ್ನಲಾಗಿದೆ. ಬೆಳಗ್ಗೆಯಲ್ಲಾ ಈ ಕೋಣೆ ಮುಚ್ಚಿಯೇ ಇರುತ್ತಿತ್ತು.