49 ವರ್ಷದ ವ್ಯಕ್ತಿಯೊಬ್ಬ ತನ್ನ ಲಿವ್ ಇನ್ ಪಾರ್ಟ್ನರ್ನ್ನು ಕೊಲೆ ಮಾಡಿದ್ದು ಮಾತ್ರವಲ್ಲದೇ ಅಡುಗೆ ಮನೆಯಲ್ಲೇ ಶವವನ್ನು ಸುಟ್ಟ ಆಘಾತಕಾರಿ ಘಟನೆಯೊಂದು ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ವರದಿಯಾಗಿದೆ.
ಆರೋಪಿಯನ್ನು ಬಿನೋಯ್ ಎಂದು ಗುರುತಿಸಲಾಗಿದ್ದು ಈತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈತ ಕಳೆದ 26 ದಿನಗಳಿಂದ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ. ಕಾಣೆಯಾಗಿದ್ದ ಮಹಿಳೆಯ ಶವವು ಸೆಪ್ಟೆಂಬರ್ 3ರಂದು ಪತ್ತೆಯಾಗಿತ್ತು. ಮೃತ ಮಹಿಳೆಯನ್ನು 45 ವರ್ಷದ ಸಿಂಧು ಬಾಬು ಎಂದು ಗುರುತಿಸಲಾಗಿದೆ.
ಈಕೆ ಬಿನೋಯ್ ನಿವಾಸದಲ್ಲಿ ತನ್ನ ಪುತ್ರ ಅಖಿಲ್ ಜೊತೆ ಬಾಡಿಗೆಗೆ ವಾಸವಿದ್ದರು ಎನ್ನಲಾಗಿದೆ.
ಬಿನೋಯ್ ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಜಿಲ್ಲೆಯ ಪ್ಲಾಂಟೇಷನ್ ಪ್ರದೇಶದಲ್ಲಿ ಅವಿತಿದ್ದ. ಆದರೆ ಪ್ರಕರಣ ಭೇದಿಸಲು ವಿಶೇಷ ತಂಡ ರಚಿಸಿದ್ದ ಪೊಲೀಸರು ಸ್ಥಳೀಯರ ನೆರವಿನಿಂದ ಬಿನೋಯ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಂಧು ನಾಪತ್ತೆಯಾಗಿದ್ದಾಳೆ ಎಂದು ಆಕೆಯ ಕುಟುಂಬಸ್ಥರು ಆಗಸ್ಟ್ 12ರಂದು ಪ್ರಕರಣ ದಾಖಲಿಸಿದ್ದರು. ಪೊಲೀಸರು ಸಿಂಧು ಹುಡುಕಾಟ ಶುರು ಮಾಡಿದ ವೇಳೆ ಮೃತದೇಹ ಪತ್ತೆಯಾಗಿದೆ.
ಪತಿಯಿಂದ ದೂರಾಗಿದ್ದ ಸಿಂಧು ಬಿನೋಯ್ ಜೊತೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಆದರೆ ಸಿಂಧು ತನ್ನ ಪತಿಯ ಮೇಲೆ ಸಹಾನುಭೂತಿ ತೋರಿದ್ದೇ ಬಿನೋಯ್ ಕೋಪಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಬಿನೋಯ್ ಸಿಂಧುಳನ್ನು ಕೊಲೆಗೈದಿದ್ದ ಎನ್ನಲಾಗಿದೆ.