ಕಲಬುರ್ಗಿ: ಕೆಇಎ ಪರೀಕ್ಷಾ ಅಕ್ರಮದ ಕಿಂಗ್ ಪಿನ್ ಆರ್.ಡಿ.ಪಾಟೀಲ್ ಬಂಧನವಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಆರೋಪಿ ಆರ್.ಡಿ.ಪಾಟೀಲ್ ಕೋಟಿ ಕೋಟಿ ಹಣ ಡೀಲ್ ಮಾಡಿಕೊಂಡಿದ್ದ ಎಂಬ ಮಾಹಿತಿ ತನಿಖೆ ವೇಳೆ ಬಯಲಾಗಿದೆ.
ಪರೀಕ್ಷಾ ಅಕ್ರಮ ಸಂಬಂಧ 15 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಈ ವೇಳೆ ಆರ್.ಡಿ.ಪಾಟೀಲ್ ಹಣ ಪಡೆದಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. ಆರ್.ಡಿ.ಪಾಟೀಲ್ ಅಂದಾಜು 300 ಜನ ಅಭ್ಯರ್ಥಿಗಳಿಂದ 35-40 ಕೋಟಿ ಹಣ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ತಿಳಿದುಬಂದಿದೆ.
ಆರ್.ಡಿ.ಪಾಟೀಲ್ ಜೊತೆ ದೊಡ್ಡ ಟೀಂ ಕೂಡ ಇತ್ತು ಎ, ಬಿ ಹಾಗೂ ಸಿ ಹಂತದ ಗ್ರೂಪ್ ಗಳ ಮೂಲಕ ಈತ ಅಕ್ರಮ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಪ್ರಮುಖವಾಗಿ ಆರ್.ಡಿ.ಪಾಟೀಲ್ ಜೊತೆ ಮೂವರು ಇದ್ದು ಅವರಲ್ಲಿ ಓರ್ವ ಸರ್ಕಾರಿ ನೌಕರ. ಮೂವರು ಪ್ರಶ್ನೆ ಪತ್ರಿಕೆ ತರುವುದು, ಉತ್ತರ ರೆಡಿ ಮಾಡುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಇನ್ನು ಬಿ ಗುಂಪಿನಲ್ಲಿ ಶಶಿಕುಮಾರ್, ಸಾಗರ್ ಎಂಬುವವರಿದ್ದು, ಸಿ ಗುಂಪಿನಲ್ಲಿ 12 ಜನರು ಇದ್ದರು ಎಂದು ತಿಳಿದುಬಂದಿದೆ.
ಒಟ್ಟಾರೆ ಪರೀಕ್ಷಾ ಅಕ್ರಮದಲ್ಲಿ ಕಿಂಗ್ ಪಿನ್ ಆರ್.ಡಿ.ಪಾಟೀಲ್ ಜೊತೆ ದೊಡ್ಡ ಗುಂಪು ಅಕ್ರಮವೆಸಗಿರುವ ಶಂಕೆ ಇದ್ದು, ತನಿಖೆ ತೀವ್ರಗೊಂಡಿದೆ.