
ವಿಶ್ವದಲ್ಲಿ ಕೊರೋನಾ ಕಾಣಿಸಿಕೊಂಡಾಗಿನಿಂದ ದಿನಕ್ಕೊಂದು ಆವಿಷ್ಕಾರ ನಡೆಯುತ್ತಲೇ ಇದೆ. ಅದರಲ್ಲೂ ಕೊರೋನಾದಿಂದ ತಪ್ಪಿಸಿಕೊಳ್ಳಲು ಅಗತ್ಯವಿರುವ ವಿಷಯಕ್ಕೆ ಸಂಬಂಧಿಸಿದಂತೆ ನೂರಾರು ಅನ್ವೇಷಣೆಗಳು ನಡೆದಿದ್ದು, ಇದೀಗ ಬೆಂಗಳೂರಿನ ಯುವಕರ ತಂಡ ರೋಗ ನಿರೋಧಕ ಔಷಧ ಸಿಂಪಡಿಸುವ ಸ್ವಯಂಚಾಲಿತ ಟನಲ್ ಅಭಿವೃದ್ಧಿಪಡಿಸಿದೆ.
ಬೆಂಗಳೂರಿನ ಸ್ಟಾರ್ಟ್ ಅಪ್ ಸಂಸ್ಥೆಯೊಂದು ಈ ಟನಲ್ ಅಭಿವೃದ್ಧಿಪಡಿಸಿದ್ದು ಇದಕ್ಕೆ ವಿಮರ್ಜನ್ 3.0 ಎಂದು ಹೆಸರಿಡಲಾಗಿದೆ. ಈ ಆಟೋಮ್ಯಾಟಿಕ್ ಔಷಧ ಸಿಂಪಡಿಸುವ ಟನಲ್‌ನಿಂದ ಕೊರೋನಾ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾಗುತ್ತದೆ ಎನ್ನುವ ಮಾತನ್ನು ಸಂಸ್ಥೆ ಹೇಳಿದೆ.
ಪ್ರಮುಖವಾಗಿ ಮಾಲ್, ಮಾರ್ಕೆಟ್ ಹಾಗೂ ಹೆಚ್ಚು ಜನ ಓಡಾಡುವ ಪ್ರದೇಶದಲ್ಲಿ ಸ್ಯಾನಿಟೈಸ್ ಅಗತ್ಯವಿದೆ. ಇಂತಹ ಕಡೆ ಪ್ರತಿಯೊಬ್ಬರನ್ನು ಸ್ಯಾನಿಟೈಸ್ ಮಾಡುವುದು ಕಷ್ಟ. ಈ ಎಲ್ಲ ತಾಪತ್ರಯವನ್ನು ಈ ವಿನೂತನ ಟನಲ್ ತಪ್ಪಿಸಲಿದೆ ಎಂದು ಹೇಳಲಾಗಿದೆ.