alex Certify ರೈತರಿಗೆ ಮುಖ್ಯ ಮಾಹಿತಿ: ಜಾನುವಾರುಗಳಿಗೆ ಕಾಲುಬಾಯಿ ರೋಗಕ್ಕೆ ಉಚಿತ ಲಸಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಮುಖ್ಯ ಮಾಹಿತಿ: ಜಾನುವಾರುಗಳಿಗೆ ಕಾಲುಬಾಯಿ ರೋಗಕ್ಕೆ ಉಚಿತ ಲಸಿಕೆ

ಬೆಂಗಳೂರು: ರಾಜ್ಯದ ಎಲ್ಲ ಕೃಷಿ ವಿಜ್ಞಾನ ಕೇಂದ್ರಗಳು, ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ 114.53 ಲಕ್ಷ ಜಾನುವಾರುಗಳಿಗೆ ಕಾಲುಬಾಯಿ ರೋಗಕ್ಕೆ ಲಸಿಕೆ ನೀಡಲಾಗುತ್ತಿದೆ. 6303 ಸಿಬ್ಬಂದಿಗಳನ್ನು ಈ ಲಸಿಕಾ ಕಾರ್ಯಕ್ರಮಕ್ಕೆ ನಿಯೋಜಿಸಲಾಗಿದೆ. ರಾಜ್ಯದ ಎಲ್ಲ ರೈತರು ಮತ್ತು ಪಶುಪಾಲಕರು ಜಾನುವಾರು ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದು ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಅಕ್ಟೋಬರ್ 10 ರಿಂದ ನವೆಂಬರ್ 15 ರ ವರೆಗೆ ನಡೆಯುವ ಮೊದಲನೇ ಸುತ್ತಿನ ಕಾಲು ಬಾಯಿ ರೋಗ ಲಸಿಕಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರವನ್ನು ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪಶುಪಾಲನಾ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಕರ್ತವ್ಯ ಲೋಪ ಆಗದಂತೆ ಎಚ್ಚರವಹಿಸಲು ಸೂಚಿಸಲಾಗಿದೆ.

ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕೊರೊನಾ ನೆಪ ಒಡ್ಡಿ ಅಧಿಕಾರಿಗಳು ಕರ್ತವ್ಯದಿಂದ ಜಾರಿಕೊಳ್ಳಲು ಪ್ರಯತ್ನಿಸುತ್ತಿರುವುದು ತಿಳಿದು ಬಂದಿದೆ. ಜಾನುವಾರು ಆರೋಗ್ಯದ ದೃಷ್ಟಿಯಿಂದ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ಅತ್ಯಂತ ಮಹತ್ವದ ಲಸಿಕಾ ಕಾರ್ಯಕ್ರಮವಾಗಿದ್ದು, ಯಾವುದೇ ಜಿಲ್ಲೆಗಳಲ್ಲಿ ಇದಕ್ಕೆ ಹಿನ್ನಡೆಯಾದಲ್ಲಿ, ರೈತರ ಹಿತ ಕಾಪಾಡದ ಆಯಾ ಜಿಲ್ಲೆಯ ಅಧಿಕಾರಿಗಳ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಭಾರತ ಸರ್ಕಾರದ ಕೇಂದ್ರ ವಲಯದ ಕಾರ್ಯಕ್ರಮವಾದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮಕ್ಕೆ ಸೆಪ್ಟೆಂಬರ್ 11 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ.

ಯೋಜನೆಯ ಉದ್ದೇಶಗಳು

ಲಸಿಕೆ ಹಾಕುವ ಮೂಲಕ 2025 ಕ್ಕೆ ಕಾಲುಬಾಯಿ ರೋಗವನ್ನು ನಿಯಂತ್ರಿಸುವುದು ಮತ್ತು 2030 ರ ವೇಳೆಗೆ ಕಾಲುಬಾಯಿ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು.

ಶೇ 100 ರಷ್ಟು ದನ, ಎಮ್ಮೆ, ಹಂದಿ, ಕುರಿ ಹಾಗೂ ಮೇಕೆಗಳಲ್ಲಿ ಕಾಲುಬಾಯಿ ರೋಗಕ್ಕೆ 2 ಬಾರಿ ಕಡ್ಡಾಯವಾಗಿ ಲಸಿಕೆ ಹಾಕಲಾಗುತ್ತದೆ. 2020 -21 ನೇ ಸಾಲಿನಲ್ಲಿ 4ನೇ ಸುತ್ತಿನ National Steering Committee ಸಭೆಯ ನಡವಳಿಯಂತೆ ಮೊದಲನೇ ಸುತ್ತಿನ ಕಾಲುಬಾಯಿ ರೋಗದ ಲಸಿಕಾ ಕಾರ್ಯಕ್ರಮದಲ್ಲಿ ಶೇಕಡ 100 ರಷ್ಟು ದನ ಮತ್ತು ಎಮ್ಮೆಗಳಿಗೆ ಮಾತ್ರ ಲಸಿಕೆ ನೀಡಲಾಗಿದೆ.

ರೈತರಿಗೆ ಆರ್ಥಿಕ ಸಂಕಷ್ಟವನ್ನು ತಂದೊಡ್ಡುವ ಕಾಲುಬಾಯಿ ರೋಗವನ್ನು ನಿಯಂತ್ರಿಸಲು ಪ್ರತಿ 6 ತಿಂಗಳಿಗೊಮ್ಮೆ ಈ ಲಸಿಕೆ ಹಾಕಿಸುವುದರ ಮೂಲಕ ಜಾನುವಾರುಗಳ ಆರೋಗ್ಯ ಕಾಪಾಡುವುದು ಮತ್ತು ನಿಯಂತ್ರಣಕ್ಕೆ ಒತ್ತು ನೀಡುವುದು.

ಕಾಲುಬಾಯಿ ಜ್ವರ ಲಸಿಕೆಯ ಭಾಗವಾಗಿ 4 ರಿಂದ 5 ತಿಂಗಳ ಕರುಗಳಿಗೆ ಕಡ್ಡಾಯವಾಗಿ ಬೂಸ್ಟರ್ ಡೋಸ್ ಹಾಕುವುದು.

ದೇಶಾದ್ಯಂತ ಎಲ್ಲ ರಾಜ್ಯಗಳಲ್ಲಿ ಏಕರೂಪದ ನಿಗದಿತ ಸಮಯಾವಧಿಯಲ್ಲಿ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು.

ಜಾನುವಾರುಗಳಿಗೆ ಲಸಿಕೆ ಹಾಕುವ ಒಂದು ತಿಂಗಳ ಮೊದಲು ಜಂತುನಾಶಕ ನೀಡಲಾಗುತ್ತದೆ.

ಲಸಿಕೆ ಹಾಕುವ ಜಾನುವಾರುಗಳಿಗೆ ಕಡ್ಡಾಯವಾಗಿ 12 ಸಂಖ್ಯೆವುಳ್ಳ ವಿಶಿಷ್ಟ ಟ್ಯಾಗ್ ಅಳವಡಿಸುವುದು.

2011 -12 ರಿಂದ ಸತತ 16 ಸುತ್ತುಗಳ ಲಸಿಕಾ ಕಾರ್ಯಕ್ರಮವನ್ನು ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ, ಕರ್ನಾಟಕ ಹಾಲು ಮಹಾಮಂಡಳಿ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳ ಸಹಯೋಗದಲ್ಲಿ ಯಶಸ್ವಿಯಾಗಿ ನಿರ್ವಹಿಸಲಾಗಿದೆ.

ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮ National Animal Disease Control Programme (NADCP) ಅಡಿಯಲ್ಲಿ ಮೊದಲನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ಅಕ್ಟೋಬರ್ 2 ರಿಂದ 15 ರ ವರೆಗೆ ಕರ್ನಾಟಕ ಹಾಲು ಮಹಾಮಂಡಳಿ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳ ಸಹಯೋಗದಲ್ಲಿ ರಾಜ್ಯಾದ್ಯಂತ ವ್ಯವಸ್ಥಿತವಾಗಿ ನಡೆಸಲಾಗುತ್ತದೆ.

ರಾಜ್ಯಾದ್ಯಂತ ಸುಮಾರು 114.53 ಲಕ್ಷ ದನ, ಎಮ್ಮೆಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಸದರಿ ಯೋಜನೆ ಅಡಿಯಲ್ಲಿ ಮೂರು ತಿಂಗಳ ಒಳಗಿರುವ ಕರುಗಳು, ಗರ್ಭದರಿಸಿದ ಹಾಗೂ ಅನಾರೋಗ್ಯ ಪೀಡಿತ ಜಾನುವಾರಗಳನ್ನು ಹೊರತುಪಡಿಸಿ ಎಲ್ಲ ರಾಸುಗಳಿಗೆ ಲಸಿಕೆ ಹಾಕಲಾಗುತ್ತದೆ. ಈ ಲಸಿಕೆಗೆ ಒಳಪಡದ ಜಾನುವಾರುಗಳನ್ನು ಮುಂದಿನ ಮೂರು ತಿಂಗಳ ಅವಧಿಯಲ್ಲಿ ನಡೆಸುವ ಕೊಂಬಿಂಗ್ ಸುತ್ತಿನಲ್ಲಿ ಲಸಿಕೆಗೆ ಒಳಪಡಿಸಲಾಗುತ್ತದೆ.

ಜಾನುವಾರಗಳ “ಸಮೂಹ ರೋಗ ನಿರೋಧಕತೆ” ಹೆಚ್ಚಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶ. ಲಸಿಕೆ ಹಾಕಿಸುವುದರಿಂದ ಜಾನುವಾರುಗಳಲ್ಲಿ ರೋಗ ನಿರೋಧಕ ಶಕ್ತಿವೃದ್ಧಿಯಾಗಿ ರೋಗವನ್ನು ಹೆಚ್ಚು ಪ್ರಮಾಣದಲ್ಲಿ ನಿಯಂತ್ರಿಸಬಹುದಾಗಿದೆ.

ಕರ್ನಾಟಕ ಹಾಲು ಮಹಾಂಡಳಿ ಹಾಗೂ ಜಿಲ್ಲಾ ಒಕ್ಕೂಟದ ವತಿಯಿಂದ ವಾಹನಗಳ ವ್ಯವಸ್ಥೆ ಮಾಡಲಾಗಿದ್ದು ಈ ಲಸಿಕಾ ಕಾರ್ಯಕ್ರಮದಲ್ಲಿ ಅಂದಾಜು 6303 ಅಧಿಕಾರಿಗಳು/ಸಿಬ್ಬಂದಿ ಭಾಗವಹಿಸಿ ಉಚಿತವಾಗಿ ಲಸಿಕೆ ನೀಡಲಿದ್ದಾರೆ.

ರಾಜ್ಯವನ್ನು ರೋಗಮುಕ್ತ ವಲಯವನ್ನಾಗಿಸುವಲ್ಲಿ ಮತ್ತು ಹೈನುಗಾರಿಕೆಗೆ ಅಂತರಾಷ್ಟ್ರೀಯ ಮಾರುಕಟ್ಟೆ ಒದಗಿಸುವಲ್ಲಿ ಲಸಿಕಾ ಕಾರ್ಯಕ್ರಮ ಮಹತ್ವಪೂರ್ಣವಾಗಿದೆ.

ರೈತಬಾಂಧವರು ಹಾಗೂ ಜಾನುವಾರು ಮಾಲೀಕರು ಕಾರ್ಯಕ್ರಮದ ಉಪಯೋಗ ಪಡೆದುಕೊಳ್ಳಬೇಕು. ಈ ಹಿಂದೆ ಎಷ್ಟೆಬಾರಿ ಲಸಿಕೆ ಹಾಕಿಸಿದ್ದರೂ ಸಹ ಮತ್ತೊಮ್ಮೆ ತಮ್ಮ ಗ್ರಾಮಗಳಲ್ಲಿ ನಿಗದಿಯಾದ ದಿನಾಂಕದಂದು ಲಸಿಕೆ ಮಾಡಿಸಬೇಕು.

ಪಶುಪಾಲನಾ ಇಲಾಖೆಯ ಜಾನುವಾರುಗಳ ಆರೋಗ್ಯ ಸಂರಕ್ಷಣೆಯ ಅತೀ ಮುಖ್ಯ ಕಾರ್ಯಕ್ರಮದ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಗಳಲ್ಲಿ, ಅಲ್ಲದೇ ನಗರಸಭೆ ಮತ್ತು ಪಟ್ಟಣ ಸಭೆ ಹಾಗೂ ಮಹಾನಗರ ಪಾಲಿಕೆಯಲ್ಲಿ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯವರಿಗೆ ಲಸಿಕಾ ಅಭಿಯಾನ ಯಶಸ್ವಿಯಾಗಿ ಕಾರ್ಯಗತಗೊಳ್ಳಲು ಸಂಪೂರ್ಣ ಸಹಕಾರ ನೀಡಲು ಸಚಿವರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...