ಬೇರೆ ರಾಜ್ಯಗಳಲ್ಲಿ ವರದಿಯಾಗುತ್ತಿದ್ದ ಆಕ್ಸಿಜನ್ ಅಭಾವದ ಸಮಸ್ಯೆ ಇದೀಗ ರಾಜ್ಯದಲ್ಲೂ ಶುರುವಾಗಿದೆ. ನಿನ್ನೆಯಷ್ಟೇ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಆಮ್ಲಜನಕ ಸಿಗದೇ ಬರೋಬ್ಬರಿ 23 ಮಂದಿ ಉಸಿರು ಚೆಲ್ಲಿದ್ದಾರೆ. ಪ್ರಾಣವಾಯು ಕೊರತೆಯಿಂದಾಗಿ ಚಾಮರಾಜನಗದಲ್ಲಿ ಈ ಸಾಮೂಹಿಕ ಸಾವು ಸಂಭವಿಸಿದ್ದರ ಬೆನ್ನಲ್ಲೇ ಇದೀಗ ಕಲಬುರಗಿಯಲ್ಲೂ ಇಂತದ್ದೇ ಪ್ರಕರಣ ವರದಿಯಾಗಿದೆ.
ಕಲಬುರಗಿಯ ಅಫಜಲ್ಪುರ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಆಮ್ಲಜನಕ ಸಿಗದೇ ನಾಲ್ವರು ಸಾವನ್ನಪ್ಪಿದ್ದಾರೆ. ಈ ಆಸ್ಪತ್ರೆಯಲ್ಲಿ 32 ಮಂದಿ ಸೋಂಕಿತರಿಗೆ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ನಿನ್ನೆ ಸಂಜೆ 7 ಗಂಟೆಯಿಂದ ಆಕ್ಸಿಜನ್ ಅಭಾವ ಕಂಡು ಬಂದ ಹಿನ್ನೆಲೆ ಈ ದುರ್ಘಟನೆ ಸಂಭವಿಸಿದೆ. ಆಸ್ಪತ್ರೆ ಆವರಣದಲ್ಲಿ ಸಂಬಂಧಿಕರ ಗೋಳಾಟ ಮುಗಿಲುಮುಟ್ಟಿದೆ.
ಇನ್ನು ಈ ವಿಚಾರವಾಗಿ ಮಾತನಾಡಿ ಅಫಜಲ್ಪುರ ಟಿಹೆಚ್ಒ ರತ್ನಾಕರ್, ಆಸ್ಪತ್ರೆಯಲ್ಲಿ 32 ಮಂದಿ ಸೋಂಕಿತರು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ಉಂಟಾಗಿರುವ ಬಗ್ಗೆ ಡಿಸಿ ಗಮನಕ್ಕೆ ತಂದಿದ್ದೇವೆ ಎಂದು ಹೇಳಿದ್ದಾರೆ.