alex Certify ರೈತರು, ಉದ್ಯೋಗದ ನಿರೀಕ್ಷೆಯಲ್ಲಿದ್ದ ಗ್ರಾಮೀಣ ಜನತೆಗೆ ಭರ್ಜರಿ ‘ಗುಡ್ ನ್ಯೂಸ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರು, ಉದ್ಯೋಗದ ನಿರೀಕ್ಷೆಯಲ್ಲಿದ್ದ ಗ್ರಾಮೀಣ ಜನತೆಗೆ ಭರ್ಜರಿ ‘ಗುಡ್ ನ್ಯೂಸ್’

ಕೋಲಾರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರು, ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಬಡತನ ರೇಖೇಗಿಂತ ಕೆಳಗೆ ಇರುವ ರೈತರು, ಜಮೀನು, ಜಾಬ್‍ಕಾರ್ಡ ಹಾಗೂ ಬ್ಯಾಂಕ್ ಖಾತೆ ಹೊಂದಿರುವ ರೈತರು ಯೋಜನೆಯ ಫಲಾನುಭವಿಗಳಾಗಿರುತ್ತಾರೆ.

ದಿನಕ್ಕೆ 275 ರೂ. ರಂತೆ ಗಂಡು ಮತ್ತು ಹೆಣ್ಣು ಕೂಲಿಕಾರ್ಮಿಕರಿಗೆ ಸಮಾನ ವೇತನ ನೀಡಲಾಗುವುದು. ಪ್ರತಿ ಕುಟುಂಬಕ್ಕೆ ಗರಿಷ್ಠ 100 ದಿನಗಳವರೆಗೆ ಉದ್ಯೋಗ ಒದಗಿಸಬಹುದಾಗಿರುತ್ತದೆ. ಬರಪೀಡಿತ ತಾಲ್ಲೂಕುಗಳಲ್ಲಿ ಗರಿಷ್ಠ 150 ದಿನಗಳವರೆಗೆ ಉದ್ಯೋಗ ಒದಗಿಸಬಹುದಾಗಿರುತ್ತದೆ.

ರೈತರು ತಮ್ಮ ಸ್ವಂತ ಜಮೀನಿನಲ್ಲಿ ದುಡಿಮೆ ಮಾಡಿ ಹೊಸ ತೋಟ ಅಭಿವೃದ್ಧಿ ಪಡಿಸಿಕೊಳ್ಳುವುದರ ಜೊತೆಗೆ ಸರ್ಕಾರದಿಂದ ಕೂಲಿ ವೇತನ ಪಡೆಯಲು ಉತ್ತಮ ಅವಕಾಶವಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ತೋಟ ಅಭಿವೃದ್ಧಿ ಪಡಿಸಿದ ಫಲಾನುಭವಿಗಳಿಗೆ (ಫಲಾನುಭವಿ ಇಚ್ಚಿಸಿದ್ದಲ್ಲಿ) ಹನಿ ನೀರಾವರಿ ಸೌಲಭ್ಯವನ್ನು ಒದಗಿಸಲು ಪ್ರಥಮ ಆದ್ಯತೆ ನೀಡಲಾಗುವುದು.

ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮ: ಮಾವು, ಸಪೋಟ, ದಾಳಿಂಬೆ, ಸೀಬೆ, ಸಿಟ್ರಸ್ (ನಿಂಬೆ), ಹುಣಸೆ, ನೇರಳೆ, ಸೀತಾಫಲ, ಬಾರೆ, ನಲ್ಲಿ, ನುಗ್ಗೆ, ಹಲಸು, ಗುಲಾಬಿ, ಮಲ್ಲಿಗೆ, ಗೋಡಂಬಿ, ಕರೆಬೇವು, ತೆಂಗು ಮತ್ತು ವೀಳ್ಯದೆಲೆ ಪ್ರದೇಶ ವಿಸ್ತರಣೆ ಕಾಮಗಾರಿಗಳ ಅಭಿವೃದ್ಧಿಗೆ ರೈತರಿಗೆ ಸಹಾಯಧನ ನೀಡಲಾಗುತ್ತದೆ.

ತೋಟಗಾರಿಕೆ ಬೆಳೆಗಳ ಪುನಃಶ್ಚೇತನ ಕಾರ್ಯಕ್ರಮ: ಮಾವು, ಸಪೋಟ, ತೆಂಗು ಮತ್ತು ಗೋಡಂಬಿ ಪುನಃಶ್ಚೇತನ ಕಾಮಗಾರಿಗಳ ಅಭಿವೃದ್ಧಿಗೆ ರೈತರಿಗೆ ಸಹಾಯಧನ ನೀಡಲಾಗುತ್ತದೆ.

ಸಾರ್ವಜನಿಕ ಸ್ಥಳಗಳಲ್ಲಿ ಪೌಷ್ಠಿಕ ತೋಟಗಳ ನಿರ್ಮಾಣ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿನ ಸರ್ಕಾರಿ ಶಾಲೆ/ವಸತಿ ಶಾಲೆ/ವಸತಿ ನಿಲಯ/ಅನುದಾನಿತ ವಸತಿ ನಿಲಯಗಳ ಆವರಣದಲ್ಲಿ ಪೋಷಕಾಂಶ ತೋಟ ಅಭಿವೃದ್ಧಿಪಡಿಸಿ ಶಾಲೆಗಳ ಮಧ್ಯಾಹ್ನದ ಬಿಸಿ ಊಟ ಅಥವಾ ವಸತಿ ನಿಲಯಗಳ ಅವಶ್ಯಕತೆ ಸ್ವಲ್ಪ ಮಟ್ಟಿಗೆ ನೀಗಿಸಲು ಸಹಾಯವಾಗುತ್ತದೆ.

ಈರುಳ್ಳಿ ಶೇಖರಣಾ ಘಟಕಗಳ ಅಭಿವೃದ್ಧಿ: ಈ ಯೋಜನೆಯಡಿ 10 ಟನ್ ಸಾಮಥ್ರ್ಯದ ಈರುಳ್ಳಿ ಸಂಗ್ರಹಣಾ ಘಟಕ ನಿರ್ಮಾಣಕ್ಕಾಗಿ ಯೋಜನೆಯಿಂದ 35,000 ರೂ. ಹಾಗೂ 23,606 ರೂ. ಸಹಾಯಧನದೊಂದಿಗೆ ಅನುಷ್ಠಾನಿಸಲು ಅವಕಾಶ ನೀಡಲಾಗಿದೆ.

ಮಣ್ಣು, ನೀರು ಸಂರಕ್ಷಣಾ / ಕೊಳವೆ ಬಾವಿ ಮರುಪೂರಣ ಘಟಕ: ಮಹಾತ್ಮಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೊಳವೆ ಬಾವಿ ಮರುಪೂರಣ ಘಟಕ ಸ್ಥಾಪನೆಗೆ 19,000 ರೂ. ಸಹಾಯಧನ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸುವಂತೆ ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ) ಕೋಲಾರ ಅವರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...