ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ ರೈತರಿಗೆ ಕೆಲವೇ ದಿನಗಳಲ್ಲಿ ಹಣ ಪಾವತಿ ಮಾಡಲಾಗುವುದು ಎಂದು ತೋಟಗಾರಿಕೆ ಸಚಿವ ನಾರಾಯಣಗೌಡ ಹೇಳಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ನಷ್ಟಕ್ಕೆ ಒಳಗಾದ ಹಣ್ಣು, ತರಕಾರಿ ಬೆಳೆಗಾರರು, ಹೂವು ಬೆಳೆಗಾರರ ಮಾಹಿತಿ ಪಡೆಯಲಾಗಿದೆ. ರೈತರ ಖಾತೆಗಳಿಗೆ ಕೆಲವೇ ದಿನಗಳಲ್ಲಿ ಹಣ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಹೂವು ಬೆಳೆಗಾರರಿಗೆ ಭಾರಿ ಪ್ರಮಾಣದಲ್ಲಿ ನಷ್ಟವಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಸಭೆ, ಶುಭ ಸಮಾರಂಭಗಳು ನಡೆಯದ ಕಾರಣ ಮಾರುಕಟ್ಟೆ ಒದಗಿಸಲು ಅವಕಾಶ ಸಿಗಲಿಲ್ಲ. ಹೂವು ಬೆಳೆಗಾರರಿಗೆ ಪರಿಹಾರವಾಗಿ ಪ್ರತಿ ಹೆಕ್ಟೇರ್ ಗೆ 25 ಸಾವಿರ ರೂಪಾಯಿ ನೀಡಲಿದ್ದು ಇದಕ್ಕಾಗಿ 31.83 ಕೋಟಿ ಕಾಯ್ದಿರಿಸಲಾಗಿದೆ ಎಂದು ಹೇಳಿದ್ದಾರೆ.
ಹಣ್ಣು, ತರಕಾರಿ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ 15 ಸಾವಿರ ರೂ. ಪರಿಹಾರ ಘೋಷಿಸಿದ್ದು 137 ಕೋಟಿ ರೂಪಾಯಿ ಕಾಯ್ದಿರಿಸಲಾಗಿದೆ. ರೈತರ ಖಾತೆಗಳಿಗೆ ಶೀಘ್ರವೇ ಹಣ ವರ್ಗಾವಣೆ ಮಾಡಲಿದ್ದು, ಪಟ್ಟಿಯಲ್ಲಿ ಹೆಸರು ಕೈಬಿಡಲಾಗಿದ್ದರೆ ರೈತರು ಹೆಸರು ಸೇರಿಸಲು ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.