alex Certify ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ನಾಳೆಯಿಂದಲೇ ಶೇಕಡ 50 ರಷ್ಟು ಹಾಸಿಗೆ ಒದಗಿಸಿ: ಸಿಎಂ ಖಡಕ್ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ನಾಳೆಯಿಂದಲೇ ಶೇಕಡ 50 ರಷ್ಟು ಹಾಸಿಗೆ ಒದಗಿಸಿ: ಸಿಎಂ ಖಡಕ್ ಸೂಚನೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರೊಂದಿಗೆ ಕೋವಿಡ್ 19 ನಿರ್ವಹಣೆಗೆ ಸಂಬಂಧಿಸಿದಂತೆ ಸಭೆ ನಡೆಸಿ, ಚರ್ಚಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಇನ್ನೂ ಹೆಚ್ಚಿನ ಸಹಕಾರ ನೀಡುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಕೆಲವೆಡೆಗಳಲ್ಲಿ ಕೋವಿಡ್ ಹಾಗೂ ಕೋವಿಡ್ ಅಲ್ಲದ ರೋಗಿಗಳಿಗೂ ಚಿಕಿತ್ಸೆ ನಿರಾಕರಿಸುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಹಾಗೆಯೇ ಕೋವಿಡ್‍ಗೆ ಚಿಕಿತ್ಸೆ ಅಗತ್ಯವಿರುವವರು ಹಾಗೂ ಇತರ ಸಮಸ್ಯೆಗಳಿಂದ ಬಳಲುತ್ತಿರುವವರು ಸೂಕ್ತ ಚಿಕಿತ್ಸೆ ದೊರೆಯದೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವ ಹಾಗೂ ಹಲವರು ಪ್ರಾಣ ತ್ಯಾಗ ಮಾಡಿದ ದಾರುಣ ಘಟನೆಗಳ ಕುರಿತು ಕಳವಳ ವ್ಯಕ್ತಪಡಿಸಿದ ಸಿಎಂ, ಕೋವಿಡ್ ನಿರ್ವಹಣೆಯಲ್ಲಿ ಬೆಂಗಳೂರು ಮಾದರಿಯಾಗಿತ್ತು. ಮುಂದೆಯೂ ಮಾದರಿಯಾಗಿರಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

ಹಿಂದಿನ ಸಭೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 2 ಸಾವಿರ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸುಮಾರು 4,500 ಹಾಸಿಗೆಗಳು ದೊರೆಯುವುದು ಎಂದು ಒಮ್ಮತದ ತೀರ್ಮಾನಕ್ಕೆ ಬರಲಾಗಿತ್ತು. ಆದರೆ ಖಾಸಗಿ ವೈದ್ಯಕೀಯ ಕಾಲೇಜುಗಳು ಅಷ್ಟು ಸಂಖ್ಯೆಯ ಹಾಸಿಗೆಗಳನ್ನು ಒದಗಿಸದೆ ಇರುವುದು ಹಾಗೂ ಇನ್ನೂ ಅನೇಕ ಸಮಸ್ಯೆಗಳು ನಮ್ಮ ಸಚಿವರು ಕೆಲವು ವೈದ್ಯಕೀಯ ಕಾಲೇಜುಗಳಿಗೆ ಭೇಟಿ ನೀಡಿದಾಗ ತಿಳಿದುಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದಿನ ಈ ತುರ್ತು ಸಂದರ್ಭದಲ್ಲಿ ಮಾನವೀಯತೆಯಿಂದ ಕೋವಿಡ್ ಚಿಕಿತ್ಸೆಗೆ ಸಹಕರಿಸಬೇಕು. ಕೋವಿಡ್ ಇಲ್ಲದ ಇತರ ರೋಗಿಗಳಿಗೂ ಚಿಕಿತ್ಸೆ ನಿರಾಕರಿಸದೆ, ರಾಜ್ಯದ ವೈದ್ಯಕೀಯ ವ್ಯವಸ್ಥೆಯಲ್ಲಿ ಸಮತೋಲನ ಇರುವಂತೆ ಎಚ್ಚರ ವಹಿಸಬೇಕು ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಸೂಚಿಸಿದ್ದಾರೆ.

ಇದಲ್ಲದೆ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವುದರಿಂದ ಖಾಸಗಿ ವೈದ್ಯಕೀಯ ಕಾಲೇಜುಗಳು ಶೇ. 50 ರಷ್ಟು ಹಾಸಿಗೆಗಳನ್ನು ನಾಳೆಯಿಂದಲೇ ಕೋವಿಡ್ ಚಿಕಿತ್ಸೆಗೆ ಒದಗಿಸುವಂತೆ ತಿಳಿಸಿದ್ದಾರೆ.

ವೈದ್ಯರು, ನರ್ಸ್ ಗಳ ಕೊರತೆ ಇದ್ದರೆ, ಸರ್ಕಾರವೇ ನೇಮಕ ಮಾಡುವುದು. ಯಾವುದೇ ರೀತಿಯ ಬೆಂಬಲ ಅಗತ್ಯವಿದ್ದರೂ ಸರ್ಕಾರ ನೀಡಲಿದೆ. ಇದಕ್ಕೆ ಸ್ಪಂದಿಸಿದ ಖಾಸಗಿ ವೈದ್ಯಕೀಯ ಕಾಲೇಜುಗಳು ಶೇ. 50 ರಷ್ಟು, ಇನ್ನು ಕೆಲ ಕಾಲೇಜುಗಳು ಶೇ. 80 ರಷ್ಟು ಹಾಸಿಗೆಗಳನ್ನು ನೀಡುವುದಾಗಿ ಹಾಗೂ ಲಭ್ಯವಿರುವ ವೆಂಟಿಲೇಟರ್ ಗಳನ್ನು ಸಹ ಒದಗಿಸುವುದಾಗಿ ತಿಳಿಸಿದ್ದಾರೆ.

ಇನ್ನು‌ ಕಾಲೇಜುಗಳ ಬೆಡ್ ಗಳ ಮೇಲೆ‌ ನಿಗಾ ಇಡಲು‌ ಅಧಿಕಾರಿಗಳನ್ನು‌‌ ಈಗಾಗಲೆ ನೇಮಕ‌ ಮಾಡಲಾಗಿದೆ. ಸಭೆಗೆ ಹಾಜರಾಗದ ವೈದೇಹಿ ವೈದ್ಯಕೀಯ ಕಾಲೇಜಿಗೆ ನೋಟಿಸ್ ನೀಡಲು ಸೂಚಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...