ಕೇಂದ್ರ ಸರ್ಕಾರದ ಮಾರ್ಗಸೂಚಿಗಾಗಿ ಕಾಯುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯದಲ್ಲಿ ಲಾಕ್ ಡೌನ್ ಸಡಿಲ ಮಾಡಲಿದ್ದಾರೆ.
ರಾಜ್ಯದಲ್ಲಿ ಲಾಕ್ಡೌನ್ 4.0 ರಲ್ಲಿ ರಿಯಾಯಿತಿ ಸಿಗುವ ಸಾಧ್ಯತೆಯಿದೆ. ಕಂಟೇನ್ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ನಿರ್ಬಂಧವನ್ನು ಸಡಿಲಗೊಳಿಸಲಾಗುವುದು. ಹಸಿರು ವಲಯದಲ್ಲಿ ಬಸ್, ಆಟೋ, ಟ್ಯಾಕ್ಸಿ ಸಂಚಾರ ಆರಂಭಿಸುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಲಾಕ್ ಡೌನ್ ಸಡಿಲಗೊಳಿಸುವ ಕುರಿತಾಗಿ ಸಚಿವರು, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಈಗಾಗಲೇ ಹೋಟೆಲ್, ಫಿಟ್ನೆಸ್ ಸೆಂಟರ್, ಜಿಮ್ ತೆರೆಯುವ ಸುಳಿವು ನೀಡಿದ್ದಾರೆ.
ಸೋಮವಾರದಿಂದ ಜನಜೀವನ ಸಹಜ ಸ್ಥಿತಿಗೆ ಬರುವ ಸಾಧ್ಯತೆ ಇದ್ದು ಗಾಲ್ಫ್ ಕ್ಲಬ್, ಕ್ಲಬ್, ವಾಹನ ಸಂಚಾರ ಆರಂಭವಾಗಲಿದೆ. ಅಂಗಡಿ ಮುಂಗಟ್ಟುಗಳು ಎಂದಿನಂತೆ ವಹಿವಾಟು ನಡೆಸುವ ಸಾಧ್ಯತೆಯಿದೆ. ಮೇ 18 ರ ನಂತರ ಲಾಕ್ ಡೌನ್ ಸಡಿಲವಾಗಲಿದ್ದು, ಹೊಸ ನಿಯಮದೊಂದಿಗೆ ಲಾಕ್ ಡೌನ್ 4.0 ಜಾರಿಯಾಗಲಿದೆ. ಲಾಕ್ ಡೌನ್ ಅಜ್ಞಾತವಾಸಕ್ಕೆ ಮುಕ್ತಿ ಸಿಗಬಹುದು. ಕಂಟೇನ್ಮೆಂಟ್ ಪ್ರದೇಶ ಹೊರತುಪಡಿಸಿ ಉಳಿದ ಕಡೆ ಎಲ್ಲ ಚಟುವಟಿಕೆಗಳಿಗೆ ಅವಕಾಶ ನೀಡಬಹುದು ಎಂದು ಹೇಳಲಾಗಿದೆ.