alex Certify ಅಪಘಾತ ಮುನ್ಸೂಚನೆಗೆ ಆಧುನಿಕ ವ್ಯವಸ್ಥೆ ಜಾರಿ: KSRTC ಕೊರಿಯರ್ ಸೇವೆ ಶೀಘ್ರವೇ ಶುರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಘಾತ ಮುನ್ಸೂಚನೆಗೆ ಆಧುನಿಕ ವ್ಯವಸ್ಥೆ ಜಾರಿ: KSRTC ಕೊರಿಯರ್ ಸೇವೆ ಶೀಘ್ರವೇ ಶುರು

ಬೆಂಗಳೂರು: ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಅಪಘಾತ ತಪ್ಪಿಸಲು ವಿಶೇಷ ವ್ಯವಸ್ಥೆ ಜಾರಿಗೆ ಬರಲಿವೆ, ಈಗ ಪ್ರಾಯೋಗಿಕ ಹಂತದಲ್ಲಿರುವ ಈ ಕ್ರಮಗಳು  ಅನುಷ್ಠಾನಗೊಂಡರೆ ಬಸ್ ಗಳ ಎದುರು ಆಕಸ್ಮಿಕವಾಗಿ ಇತರ ವಾಹನಗಳು ಅಥವಾ ವ್ಯಕ್ತಿಗಳು ಅಡ್ಡ ಬಂದಲ್ಲಿ ಚಾಲಕರಿಗೆ ಎಚ್ಚರಿಕೆಯ ಸೂಚನೆ ನೀಡುವ ಮತ್ತು ಸ್ವಯಂಚಾಲಿತವಾಗಿಯೇ ಬ್ರೇಕ್ ಹಾಕಿ ಅಪಘಾತ ತಪ್ಪಿಸುವುದಕ್ಕೆ ಸಹಾಯವಾಗುತ್ತದೆ.

ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಬೆಂಗಳೂರಿನಲ್ಲಿ ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಮಾತನಾಡಿದರು.

ಅಪಘಾತಗಳ ಪರಿಹಾರವಾಗಿ ಪ್ರತಿವರ್ಷ ಸುಮಾರು 100 ಕೋಟಿ ರೂಪಾಯಿಗಿಂತ ಹೆಚ್ಚು ಹಣ ಸಾರಿಗೆ ಸಂಸ್ಥೆಗಳಿಂದ ವ್ಯಯವಾಗುತ್ತಿದೆ. ಅಷ್ಟೇ ಅಲ್ಲ, ಅನೇಕ ಸಾವು-ನೋವುಗಳಿಗೂ ಈ ಅಪಘಾತಗಳು ಕಾರಣವಾಗುತ್ತಿವೆ.  ಹಲವು ಸಂದರ್ಭಗಳಲ್ಲಿ ಇತರ ವಾಹನ ಚಾಲಕರು ನಡೆಸುವ ನಿರ್ಲಕ್ಷ್ಯದ ಚಾಲನೆಯಿಂದಾಗಿ ಉಂಟಾಗುವ ಅಪಘಾತಗಳಲ್ಲಿ ವಿನಾಕಾರಣ ನಮ್ಮ ಸರ್ಕಾರಿ ಸಾರಿಗೆ ಸಂಸ್ಥೆಗಳು ಪರಿಹಾರ ನೀಡುವಂತಹ ಸಂದರ್ಭಗಳೂ ಎದುರಾಗಿವೆ.  ಇವುಗಳನ್ನು ತಪ್ಪಿಸಲು ಅಪಘಾತಗಳ ಮುನ್ಸೂಚನೆ ನೀಡುವಂಥ ಉಪಕರಣಗಳನ್ನು ಬಸ್ ಗಳಲ್ಲಿ ಅಳವಡಿಸಲು ಸೂಚಿಸಲಾಗಿತ್ತು. ಅದರಂತೆ ಕೆಲವು ಹೈಟೆಕ್ ಸಂಸ್ಥೆಗಳೊಂದಿಗೆ ಸಾರಿಗೆ ಅಧಿಕಾರಿಗಳು ಕಾರ್ಯನಿರತರಾಗಿದ್ದಾರೆ. ಈಗಾಗಲೇ ಇಂತಹ ಉಪಕರಣಗಳನ್ನು ಅಭಿವೃದ್ಧಿಪಡಿಸಿದ ಸಂಸ್ಥೆಗಳ ಸಹಯೋಗದೊಂದಿಗೆ ಪ್ರಾಯೋಗಿಕವಾಗಿ ಈ ತಂತ್ರಜ್ಞಾನವನ್ನು ಶೀಘ್ರದಲ್ಲಿಯೇ ಪಡೆದುಕೊಳ್ಳಲು ಚಿಂತಿಸಲಾಗಿದೆ ಎಂದು ಹೇಳಿದ್ದಾರೆ.

ಕೆಲವು ದುಬಾರಿ ಕಾರ್ ಗಳಲ್ಲಿ ಇಂತಹ ತಂತ್ರಜ್ಞಾನ ಅಳವಡಿಸಿರುವುದರಿಂದ ರಾತ್ರಿ ವೇಳೆಯಲ್ಲಿ ಒಂದು ವೇಳೆ ಚಾಲಕರಿಗೆ ನಿದ್ದೆಯ ಮಂಪರು ಕವಿದಂತಾದರೆ ತಕ್ಷಣವೇ ಎಚ್ಚರಿಕೆಯ ಸೂಚನೆ ನೀಡುವಂತಹ ಮತ್ತು ಆಕಸ್ಮಿಕವಾಗಿ ವಾಹನಗಳು ಅಥವಾ ವ್ಯಕ್ತಿಗಳು ಎದುರಿಗೆ ಅಡ್ಡಬಂದರೆ ತಾನಾಗಿಯೇ ಬ್ರೇಕ್ ಹಾಕುವಂತಹ ವ್ಯವಸ್ಥೆ ಜಾರಿಗೆ ಬಂದಿದೆ. ಇಂತಹ ಆಧುನಿಕ ಪ್ರಯೋಗ ಸರ್ಕಾರಿ ಸಾರಿಗೆ ಬಸ್ ಗಳಲ್ಲೂ ಯಶಸ್ವಿಯಾದರೆ ಹಲವು ರೀತಿಯ ಅನುಕೂಲ ಸಾಧ್ಯವೆಂದು ತಿಳಿಸಿದ್ದಾರೆ.

ಲಾಕ್‍ಡೌನ್ ನಂತರದಲ್ಲಿ ಶೇಕಡ 60 ರಷ್ಟು ಬಸ್ ಸಂಚಾರ ಪ್ರಾರಂಭಿಸಲಾಗಿದೆ. ಮುಂದಿನ ತಿಂಗಳು ಕೊರಿಯರ್ ಸೇವೆಯನ್ನೂ ಸಾರಿಗೆ ಸಂಸ್ಥೆಗಳ ಮೂಲಕ ಪ್ರಾರಂಭಿಸಲಾಗುವುದು. ಈಗಾಗಲೇ ಸಾರಿಗೆ ಸಂಸ್ಥೆಗಳಲ್ಲಿ ಉಳಿತಾಯದ ಕ್ರಮವಾಗಿ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲಾಗಿದೆ. ಹೊಸ ಸಿಬ್ಬಂದಿಗಳ ನೇಮಕವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ವಿವರಿಸಿದ್ದಾರೆ.

ಇಂದಿನ ಸಭೆಯಲ್ಲಿ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್, ಕ.ರಾ.ರ.ಸಾ.ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಭದ್ರತಾ ಮತ್ತು ಜಾಗೃತಾ ನಿರ್ದೇಶಕ ಡಾ. ಅರುಣ್, ಈ.ಕ.ರ.ಸಾ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೂರ್ಮಾರಾವ್, ವಾ.ಕ.ರ.ಸಾ.ಸಂಸ್ಥೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...