alex Certify ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಹೋಟೆಲ್, ಜಿಮ್, ಪ್ರವಾಸೋದ್ಯಮ ಪುನಾರಂಭ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಹೋಟೆಲ್, ಜಿಮ್, ಪ್ರವಾಸೋದ್ಯಮ ಪುನಾರಂಭ ಸಾಧ್ಯತೆ

ಬೆಂಗಳೂರು: ಲಾಕ್ಡೌನ್ 3.0 ಮೇ 17ಕ್ಕೆ ಮುಕ್ತಾಯವಾಗಲಿದ್ದು ನಂತರದಲ್ಲಿ ಜಿಮ್, ಗಾಲ್ಫ್ ಕೋರ್ಸ್, ಸ್ಥಳೀಯ ಪ್ರವಾಸೋದ್ಯಮಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಲಾಗಿದ್ದು ಸ್ಥಳೀಯ ಪ್ರವಾಸೋದ್ಯಮ ಪುನಾರಂಭ ಕುರಿತಾಗಿ ಚರ್ಚೆ ನಡೆಸಲಾಗಿದೆ. ಕೊರೋನಾ ಬಿಕ್ಕಟ್ಟಿನಿಂದ ಪ್ರವಾಸೋದ್ಯಮ ಕ್ಷೇತ್ರ ತತ್ತರಿಸಿದೆ. ಪ್ರವಾಸೋದ್ಯಮ, ಜಿಮ್, ಫಿಟ್ನೆಸ್ ಸೆಂಟರ್ ಮತ್ತು ಗಾಲ್ಫ್ ಕೋರ್ಸ್ ಗಳನ್ನು ಪುನರಾರಂಭಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ಈ ಕುರಿತಾಗಿ ಮಾಹಿತಿ ನೀಡಿರುವ ಸಿ.ಟಿ. ರವಿ, ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಫಿಟ್ನೆಸ್ ಕೇಂದ್ರ, ಗಾಲ್ಫ್ ಕೋರ್ಸ್ ಆರಂಭ, ಹೋಟೆಲ್ ಗಳಲ್ಲಿ ಸೇವೆ ನೀಡಲು ಅನುಮತಿ ನೀಡುವ ಬಗ್ಗೆ ಚರ್ಚೆ ನಡೆಸಿದ್ದು ಸಾಮಾಜಿಕ ಅಂತರ ಕಾಪಾಡಿಕೊಂಡು ಸ್ಥಳೀಯ ಮಟ್ಟದಲ್ಲಿ ಪ್ರವಾಸೋದ್ಯಮ ಪುನರಾರಂಭಕ್ಕೆ ಉತ್ತೇಜನ ನೀಡಲು ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಮೇ 18 ರಿಂದ ಲಾಕ್ಡೌನ್ 4.0 ಹೊಸ ನಿಯಮಗಳೊಂದಿಗೆ ಹೊಸ ರೂಪದಲ್ಲಿ ಜಾರಿಗೆ ಬರಲಿದೆ. ಈ ಸಂದರ್ಭದಲ್ಲಿ ಎಲ್ಲಾ ಸುರಕ್ಷತೆ, ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಮೇ 17 ರ ನಂತರ ಜಿಮ್ ತೆರೆಯಲು ಅನುಮತಿ ನೀಡುವ ಚಿಂತನೆ ನಡೆಸಲಾಗಿದೆ. ‘ನೋಡು ಬಾ ನಮ್ಮೂರ’ ಹೆಸರಲ್ಲಿ ಆರಂಭದಲ್ಲಿ ಜಿಲ್ಲಾ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗುವುದು. ಜಿಲ್ಲೆಯೊಳಗೆ ಸ್ಥಳೀಯವಾಗಿ ನೋಡು ಬಾ ನಮ್ಮೂರ ಪ್ರವಾಸೋದ್ಯಮ ಆರಂಭಿಸಲಾಗುವುದು. ನಂತರದಲ್ಲಿ ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯಲಾಗುವುದು. ಪ್ರವಾಸೋದ್ಯಮ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದ ಪ್ಯಾಕೇಜ್ ಎದುರು ನೋಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...