ಮನೆಗೆ ವಿದ್ಯುತ್ ಪೂರೈಕೆ ಮಾಡಲು ವಿಶಿಷ್ಟವಾದ ವಾಟರ್ ಮಿಲ್ ರಚಿಸಿದ್ದಕ್ಕಾಗಿ ಕರ್ನಾಟಕದ ರೈತರೊಬ್ಬರು ನೆಟ್ಟಿಗರ ಮನ ಗೆದ್ದಿದ್ದಾರೆ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿ.ವಿ.ಎಸ್. ಲಕ್ಷ್ಮಣ್ ಕೂಡ ರೈತನ ಸಾಧನೆಯನ್ನ ಪ್ರಶಂಸಿಸಿದ್ದಾರೆ.
ಕಾಲುವೆಯಲ್ಲಿ ನೀರು ಹರಿಯುವಾಗ 150 ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಲ್ಲ ಸುಸ್ಥಿರ ವಾಟರ್ ಮಿಲ್ ವಿನ್ಯಾಸಗೊಳಿಸಲು ರೈತ ಸಿದ್ದಪ್ಪ ಪ್ಲಾಸ್ಟಿಕ್ ಟಬ್ ಹಾಗೂ ಮರ ಬಳಸಿದ್ದಾರೆ. ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ಸಿದ್ದಪ್ಪ ಮನೆಗೆ ವಿದ್ಯುತ್ ಪೂರೈಕೆ ಮಾಡಲು ನಿರಾಕರಿಸಿದ ನಂತರ ಸಿದ್ದಪ್ಪ ಈ ವಾಟರ್ ಮಿಲ್ ನಿರ್ಮಾಣಕ್ಕೆ ಮುಂದಾದರು.
ನರಗುಂದ ಬೆಟ್ಟಗಳಲ್ಲಿದ್ದ ವಾಟರ್ ಮಿಲ್ಗಳ ಕಾರ್ಯ ವಿಧಾನದಿಂದ ಪ್ರೇರಣೆ ಪಡೆದ ಸಿದ್ದಪ್ಪ ವಿದ್ಯುತ್ ಉತ್ಪಾದಿಸಲು ತನ್ನದೇ ಆದ ವಿಶಿಷ್ಟ ವಿನ್ಯಾಸವನ್ನ ತಂದಿದ್ದಾರೆ. ಈ ವಿಚಾರವನ್ನ ಸ್ವತಃ ವಿವಿಎಸ್ ಲಕ್ಷ್ಮಣ್ ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಸಿದ್ದಪ್ಪ ನೀರಿನ ಗಿರಣಿಯನ್ನ ವಿನ್ಯಾಸಗೊಳಿಸಿ ತನ್ನ ಮನೆಯ ಸಮೀಪದ ಕಾಲುವೆಯಿಂದ ವಿದ್ಯುತ್ ಉತ್ಪಾದನೆ ಮಾಡಿದ್ದಾರೆ. ಆದರೆ ಕಾಲುವೆಯಲ್ಲಿ ಕೆಲವೇ ತಿಂಗಳುಗಳ ಕಾಲ ನೀರು ಸಿಗೋದ್ರಿಂದ ಸಿದ್ದಪ್ಪನಿಗೆ ಸಂಕಷ್ಟ ತಪ್ಪಿದ್ದಲ್ಲ ಎಂದು ಲಕ್ಷ್ಮಣ್ ಬರೆದಿದ್ದಾರೆ.