ಈಗಿನ ಸೋಶಿಯಲ್ ಮೀಡಿಯಾ ಜಮಾನದಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಸೆಲ್ಫಿ ಕ್ರೇಜ್ ಇದ್ದೇ ಇರುತ್ತೆ. ಆದರೆ ಈ ಸೆಲ್ಫಿ ಹುಚ್ಚಾಟದಿಂದ ಅನೇಕರು ತಮ್ಮ ಜೀವಕ್ಕೆ ಕಂಟಕ ತಂದುಕೊಳ್ತಾರೆ.
ಮಂಗಳೂರಿನಲ್ಲಿ 16 ವರ್ಷದ ಬಾಲಕ ಬುಧವಾರ ಸ್ಟೇಷನರಿ ಗೂಡ್ಸ್ ಟ್ರೇನ್ ಮೇಲೆ ಹತ್ತಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ವಿದ್ಯುತ್ ಶಾಕ್ ಹೊಡೆದಿದ್ದು ಪರಿಣಾಮ ಆತನ ದೇಹ ಸುಟ್ಟು ಹೋಗಿದ್ದು ಬಾಲಕನ ಸ್ಥಿತಿ ಗಂಭೀರವಾಗಿದೆ.
ಮಂಗಳೂರಿನ ಜೋಕಟ್ಟೆ ರಸ್ತೆ ಸಂಖ್ಯೆ 04ರಲ್ಲಿ ಈ ಅವಘಡ ಸಂಭವಿಸಿದೆ. ಗಾಯಗೊಂಡ ಬಾಲಕನನ್ನ ಮೊಹಮ್ಮದ್ ದಿಶಾನ್ ಎಂದು ಗುರುತಿಸಲಾಗಿದೆ. ಈತ ಸೆಲ್ಫಿ ತೆಗೆದುಕೊಳ್ಳುವ ಸಲುವಾಗಿ ಗೂಡ್ಸ್ ಟ್ರೇನ್ನ್ನು ಹತ್ತಿದ್ದ. ರೈಲಿನ ಬೋಗಿಯ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವ ವೇಳೆ 25 ಸಾವಿರ ವೋಲ್ಟ್ ಕರೆಂಟ್ ಹೊಡೆದಿದ್ದರಿಂದ ಬಾಲಕ ಕೆಳಗೆ ಬಿದ್ದಿದ್ದಾನೆ.
ದಿಶಾನ್ನನ್ನ ಕೂಡಲೇ ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಈತನನ್ನ ತುರ್ತು ನಿಗಾ ಘಟಕದಲ್ಲಿ ಇಡಲಾಗಿದೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.