alex Certify ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಸರ್ಕಾರದಿಂದ ಉಚಿತ ಇಂಟರ್ ನೆಟ್ ಸೌಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಸರ್ಕಾರದಿಂದ ಉಚಿತ ಇಂಟರ್ ನೆಟ್ ಸೌಲಭ್ಯ

ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆಯಿಂದ ಲ್ಯಾಪ್‌ಟಾಪ್ ಪಡೆದಿರುವ 1.10 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಇಂಟರ್‌ನೆಟ್‌ ಸೇವೆ ಒದಗಿಸುವ ಸಂಬಂಧ ಈ ಸೇವೆ ಒದಗಿಸುವ ಕಂಪನಿಗಳ ಜತೆ ಮಾತುಕತೆ ನಡೆಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಇಂಟರ್‌ನೆಟ್‌ ಪೂರೈಕೆದಾರ ಸಂಸ್ಥೆಗಳ ಪ್ರತಿನಿಧಿಗಳ ಜತೆ ವಿಡಿಯೋ ಸಂವಾದ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಲ್ಯಾಪ್ ‌ಟಾಪ್‌ ಕೊಟ್ಟ ನಂತರ ಅವುಗಳ ಸದುಪಯೋಗ ಸರಿಯಾಗಿ ಆಗುತ್ತಿಲ್ಲ. ಈ ಕಾರಣಕ್ಕೆ ಇಂಟರ್‌ನೆಟ್‌ ಸೇವೆ ಒದಗಿಸುವಂತೆ ಕೋರಲಾಗಿದೆ. ಇದಕ್ಕೆ ಕಂಪನಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅಗತ್ಯ ಮಾಹಿತಿ ಒದಗಿಸುವಂತೆ ಕೋರಿವೆ. ಇದರ ನಡುವೆ ಆನ್‌ ಲೈನ್‌ ಕಂಟೆಂಟ್‌ ಕೂಡ ಒದಗಿಸುವ ಕೆಲಸ ಇಲಾಖೆಯಿಂದ ಆಗುತ್ತಿದೆ ಎಂದು ವಿವರಿಸಿದ್ದಾರೆ.

ಲ್ಯಾಪ್ ಟಾಪ್ ಇಲ್ಲದವರಿಗೆ ಆನ್ ಲೈನ್ ಶಿಕ್ಷಣ ಪಡೆಯಲು ತೊಂದರೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸದ್ಯ ಲ್ಯಾಪ್ ಟಾಪ್ ಹೊಂದಿರುವವರು ಅದನ್ನು ಸದ್ಬಳಕೆ ಮಾಡಿಕೊಳ್ಳಲು ಬೇಕಾದ ಸೌಲಭ್ಯ ಒದಗಿಸುವುದು ನಮ್ಮ ಗುರಿ. ಲ್ಯಾಪ್ ಟಾಪ್ ಇಲ್ಲದೇ ಇರುವವರಿಗೆ ಏನು ಎಂಬುದನ್ನು ಮುಂದೆ ತೀರ್ಮಾನ ಮಾಡಲಾಗುವುದು ಎಂದು ಹೇಳಿದ್ದಾರೆ.

ಪ್ರಥಮ ವರ್ಷದ 1.10 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅವರು ದ್ವಿತೀಯ ಪದವಿಯಲ್ಲಿ ವ್ಯಾಸಂಗ ಮಾಡಲಿದ್ದಾರೆ. ಇವರಿಗೆ ಸಾಮಾನ್ಯ ತರಗತಿ ಜತೆಗೆ ಆನ್ ಲೈನ್ ಮೂಲಕ ಶಿಕ್ಷಣ ನೀಡುವ, ತರಬೇತಿ ಒದಗಿಸುವ ಬಗ್ಗೆಯು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈಗಾಗಲೇ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ ಆರಂಭವಾದರೂ ಇಂಟರ್ ನೆಟ್ ಸಮಸ್ಯೆ ಇದೆ. ಇದರ ಜತೆಗೆ ಸಾಕಷ್ಟು ವಿದ್ಯಾರ್ಥಿಗಳಲ್ಲಿ ಲ್ಯಾಪ್ ಟಾಪ್ ಕೂಡ ಇಲ್ಲ. ಈ ರೀತಿಯ ಸಮಸ್ಯೆ, ಸವಾಲುಗಳು ಬಂದಾಗ ಅದನ್ನು ಬಗೆಹರಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ಅನಿಯಂತ್ರಿತ ಇಂಟರ್ ನೆಟ್ ಮತ್ತು ವಿದ್ಯುತ್ ಪೂರೈಕೆ ಮಾಡುವ ಮೂಲಕ ನಮ್ಮ ಸರ್ಕಾರ ಸೈ ಎನಿಸಿಕೊಂಡಿದ್ದು, ಅದೇ ಮಾದರಿಯಲ್ಲಿ ಈ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ನಗರ ಪ್ರದೇಶಗಳಲ್ಲಿ ಇಂಟರ್ ನೆಟ್ ಸೇವಾ ಪೂರೈಕೆದಾರರು ಅತ್ಯುತ್ತಮ ಸೇವೆ ಒದಗಿಸುತ್ತಿದ್ದಾರೆ. ಇದರ ಮಧ್ಯೆ ಕೆಲವರು ಅನುಮತಿ ಪಡೆಯದೆ ರಸ್ತೆ, ಪಾದಚಾರಿ ಮಾರ್ಗಗಳನ್ನು ಅಗೆಯುವುದು, ಹಾಳು ಮಾಡುವುದು ಮುಂತಾದ ಕೆಲಸ ಮಾಡುತ್ತಿದ್ದಾರೆ. ಈ ಸಂಸ್ಥೆಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿದರೆ ಸಮಸ್ಯೆ ಆಗುವುದಿಲ್ಲ. ಆದ್ದರಿಂದ ಇಂಟರ್ ನೆಟ್ ಸೇವಾ ಪೂರೈಕೆದಾರರು, ಬಿಎಂಆರ್‌ಸಿಎಲ್‌, ಗೇಲ್‌, ಬಿಬಿಎಂಪಿ, ಜಲಮಂಡಲಿ, ಬೆಸ್ಕಾಂ ಮುಂತಾದ ಸಂಸ್ಥೆಗಳ ಜತೆಗೆ ಸಮನ್ವಯತೆ ಅಗತ್ಯ. ಇದಕ್ಕೆ ಪೂರಕವಾಗಿ ಎಲ್ಲಾ ಮಾಹಿತಿಗಳನ್ನೊಳಗೊಂಡ ರೋಡ್ ಹಿಸ್ಟರಿ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕೋವಿಡ್ ಲಾಕ್ ಡೌನ್ ಬಳಿಕ ವರ್ಕ್ ಫ್ರಂ ಹೋಮ್ ವ್ಯವಸ್ಥೆಗೆ ಹೆಚ್ಚಿನ ಮಾನ್ಯತೆ ಸಿಕ್ಕಿದೆ. ಅನೇಕ ಕಂಪನಿಗಳು ಈ ವ್ಯವಸ್ಥೆಯೇ ಸೂಕ್ತ ಎಂದು ಹೇಳಿವೆ. ಭವಿಷ್ಯದಲ್ಲಿ ಕಂಪನಿಗಳು ವರ್ಕ್ ಫ್ರಂ ಹೋಮ್ ಮುಂದುವರಿಸಲು ಬಯಸಿದರೆ ಅದಕ್ಕೆ ಬೇಕಾದ ಇಂಟರ್ನೆಟ್ ಸೌಲಭ್ಯ ಒದಗಿಸಬೇಕು. ಈ ವಿಚಾರದಲ್ಲಿ ಇಂಟರ್ನೆಟ್ ಸೇವಾ ಪೂರೈಕೆದಾರರು, ಕಂಪನಿಗಳು ಮತ್ತು ಜನರ ಮಧ್ಯೆ ಸೇತುವೆಯಾಗಿ ಕೆಲಸ ಮಾಡಲು ಸರ್ಕಾರ ಸಿದ್ಧವಿದೆ ಎಂದು ಭರವಸೆ ನೀಡಿದ್ದಾರೆ.

ಐಟಿ-ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣರೆಡ್ಡಿ, ಐಟಿ ನಿರ್ದೇಶಕಿ ಮೀನಾ ನಾಗರಾಜು, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...