ರಾಜ್ಯದಲ್ಲಿ ಪ್ರಸ್ತುತ ಪರಿಸ್ಥಿತಿಯನ್ನ ನೋಡುತ್ತಿದ್ದರೆ ಲಾಕ್ಡೌನ್ ಮುಂದುವರಿಸೋದೇ ಸೂಕ್ತ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಉತ್ತರ ಕನ್ನಡದ ಭಟ್ಕಳದಲ್ಲಿ ತೌಕ್ತೆ ಚಂಡಮಾರುತದಿಂದಾದ ಹಾನಿ ವೀಕ್ಷಣೆಗೆ ತೆರಳಿದ್ದ ವೇಳೆ ಅಶೋಕ್ ಈ ಹೇಳಿಕೆ ನೀಡಿದ್ದಾರೆ.
ದೇಶದಲ್ಲಿ ಎರಡನೆ ಹಂತದ ಲಾಕ್ಡೌನ್ ಘೋಷಣೆಯಾಗುತ್ತಿದ್ದಂತೆಯೇ ರಾಜ್ಯ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಘೋಷಣೆಯಾಗಲಿದೆ. ಸದ್ಯದ ಪರಿಸ್ಥಿತಿಯನ್ನ ಗಮನದಲ್ಲಿರಿಸಿಕೊಂಡು ಸಿಎಂ ಯಡಿಯೂರಪ್ಪ ಪ್ಯಾಕೇಜ್ ಘೋಷಿಸಲಿದ್ದಾರೆ ಎಂದು ಹೇಳಿದ್ರು.
ಹಳ್ಳಿಗಳಿಗೆ ಕೊರೊನಾ ಸೋಂಕು ವ್ಯಾಪಿಸಿರೋದ್ರ ಬಗ್ಗೆ ಕಳವಳ ವ್ಯಕ್ತಪಡಿಸಿದ ಆರ್. ಅಶೋಕ್, ಪ್ರತಿ ಹಳ್ಳಿಗಳಿಗೂ ವಿಶೇಷ ತಂಡವನ್ನ ಕಳುಹಿಸಿ ಸೋಂಕು ತಡೆಯಲು ಪ್ರಯತ್ನ ಮಾಡಲಾಗುವುದು. ಹಳ್ಳಿಗಳಲ್ಲಿ ಟೆಸ್ಟಿಂಗ್ ಪ್ರಮಾಣ ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡ್ತೇವೆ ಎಂದು ಹೇಳಿದ್ರು.
ಇನ್ನು ಇದೇ ವೇಳೆ ಕೊರೊನಾ ಮೂರನೆ ಅಲೆಯ ವಿಚಾರವಾಗಿಯೂ ಮಾತನಾಡಿದ ಆರ್. ಅಶೋಕ್, ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಸೋಂಕಿನ ಪರಿಣಾಮ ಜಾಸ್ತಿ ಇರೋದ್ರಿಂದ, ಹೆಚ್ಚೆಚ್ಚು ಮಕ್ಕಳ ಆಸ್ಪತ್ರೆ ತೆರೆಯಲು ನಿರ್ಧರಿಸಿದ್ದೇವೆ. ಕೊರೊನಾ ಮೂರನೆ ಅಲೆಯನ್ನ ತಡೆಯಲು ಸರ್ಕಾರ ಸಂಪೂರ್ಣ ಸನ್ನದ್ಧವಾಗಿದೆ. ವಿರೋಧ ಪಕ್ಷದ ಮಾತುಗಳಿಗೆ ಕಿವಿಗೊಡೋದಿಲ್ಲ. ಕಾಂಗ್ರೆಸ್ನವರು ನೂರು ಕೋಟಿ ಕೊಡುತ್ತೇನೆ ಅಂತಿದ್ದಾರೆ. ಅದು ಶಾಸಕರ ಅನುದಾನದ ಹಣ. ಅವರು ಪಕ್ಷದ ವತಿಯಿಂದ ಹಣ ನೀಡುತ್ತಿಲ್ಲ. ಸರ್ಕಾರದ ಹಣವನ್ನ ಸರ್ಕಾರಕ್ಕೇ ಕೊಟ್ಟರೆ ಅದರಿಂದ ಏನು ಪ್ರಯೋಜನ..? ಎಂದು ಪ್ರಶ್ನೆ ಮಾಡಿದ್ರು.