ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆಯೇ ರಾಜ್ಯದಲ್ಲಿ ತೌಕ್ತೆ ಚಂಡ ಮಾರುತ ತನ್ನ ಅಬ್ಬರವನ್ನ ತೋರಿಸಿರುವಂತೆ ಕಾಣುತ್ತಿದೆ. ವರ್ಷದ ಮೊದಲ ಚಂಡಮಾರುತವಾದ ತೌಕ್ತೆ ಮಂಗಳೂರು ಭಾಗದಲ್ಲಿ ತನ್ನ ಎಫೆಕ್ಟ್ ತೋರಿಸಿದ್ದು ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ.
ಮಂಗಳೂರಿನ ಪಣಂಬೂರು, ಸೂರತ್ಕಲ್, ಸೋಮೇಶ್ವರ ಭಾಗಗಳಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಹೀಗಾಗಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆಯ ಸಂದೇಶ ರವಾನಿಸಿದೆ. ಈಗಾಗಲೇ ಬಂದರಿನಲ್ಲಿ ಆಳಸಮುದ್ರ ಮೀನುಗಾರಿಕಾ ಬೋಟ್ಗಳು ಲಂಗರು ಹಾಕಿವೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಉಂಟಾಗಿದೆ.
ಅರಬ್ಬಿ ಸಮುದ್ರಕ್ಕೆ ಅಪ್ಪಳಿಸಲಿರುವ ಈ ಚಂಡ ಮಾರುತಕ್ಕೆ ತೌಕ್ತೆ ಎಂದು ಹೆಸರಿಡಲಾಗಿದೆ. ಈ ಚಂಡ ಮಾರುತವು ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ದಕ್ಷಿಣ ಭಾರತದಲ್ಲಿ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.
ಹವಾಮಾನ ಇಲಾಖೆಯ ಈ ಮುನ್ಸೂಚನೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಹಾಸನ, ಕೊಡಗು, ಉತ್ತರ ಕನ್ನಡ, ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ. ಮೀನುಗಾರರಿಗೆ 1 ವಾರಗಳ ಕಾಲ ಮೀನುಗಾರಿಕೆ ಮಾಡದಂತೆ ಮುನ್ಸೂಚನೆ ನೀಡಲಾಗಿದೆ.
https://www.youtube.com/watch?v=D0Jw9uZKnmQ