ಒಂದು ಸುಂದರ ತಾಣಕ್ಕೆ ಹೋಗಬೇಕು. ಒಂದೇ ದಿನದಲ್ಲಿ ಹೋಗಿ ಬರುವಂತೆ ಇರಬೇಕು ಎಂದು ಬಯಸುವವರು ಬೆಂಗಳೂರು ಹೊರ ವಲಯದಲ್ಲಿರುವ ದೊಡ್ಡ ಆಲದ ಮರಕ್ಕೆ ಭೇಟಿ ನೀಡುವುದು ಸೂಕ್ತ.
ಇದು 400 ವರ್ಷಗಳಷ್ಟು ಹಳೆಯದಾದ ಆಲದ ಮರವಾಗಿದ್ದು, ಸುಮಾರು 3 ಎಕರೆ ಜಮೀನು ಪೂರ್ತಿ ಆವರಿಸಿದೆ. ಈ ಮರ ಕರ್ನಾಟಕದಲ್ಲಿಯೇ ಅತ್ಯಂತ ದೊಡ್ಡ ಹಾಗೂ ಭಾರತದಲ್ಲಿ ಎರಡನೇ ದೊಡ್ಡ ಮರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ದೈತ್ಯ ಮರದ ಸಮೀಪ ಚಿಕ್ಕ ಶಿವ ದೇವಾಲಯವಿದ್ದು, ಈ ಆಲದ ಮರವನ್ನು ದೈವ ಶಕ್ತಿಯುಳ್ಳ ಮರವೆಂದು ಹೇಳಲಾಗುತ್ತದೆ. ಇದರ ಬೇರು, ಕಾಂಡ ಹಾಗೂ ಕೊಂಬೆಗಳನ್ನು ಬ್ರಹ್ಮ, ವಿಷ್ಣು, ಶಿವ ಎಂದು ಹೇಳಲಾಗುತ್ತಿದ್ದು, ಈ ತ್ರಿಮೂರ್ತಿಗಳ ಸಂಗಮವೇ ಈ ಮರವೆಂಬ ನಂಬಿಕೆ ಭಕ್ತರಲ್ಲಿದೆ.
ಈ ಜಾಗದಿಂದ 6 ಕಿ.ಮೀ ದೂರದಲ್ಲಿ ಮಂಚಿನಬೆಲೆ ಜಲಾಶಯ ಹಾಗೂ 3 ಕಿ.ಮೀ ದೂರದಲ್ಲಿ ಮುಕ್ತಿ ನಾಗ ದೇವಾಲಯವಿದೆ. ಇದೊಂದು ಪವಿತ್ರ ಕ್ಷೇತ್ರವಾಗಿದ್ದು, ನಿತ್ಯವೂ ನೂರಾರು ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ.