ದಂತಚೋರ, ಶ್ರೀಗಂಧದ ಕಳ್ಳ ವೀರಪ್ಪನ್ ಹತನಾಗಿ ಹಲವು ವರ್ಷ ಕಳೆದರೂ ಆತನ ಕುರಿತ ರೋಚಕ ವಿಚಾರ ಆಗಿಂದಾಗ್ಗೆ ಹೊರಬರುತ್ತಿರುತ್ತದೆ. ಇದೀಗ ಎಲ್ಲರ ಗಮನಸೆಳೆವ ವಿಷಯ ಬಹಿರಂಗವಾಗಿದೆ. ಕನ್ನಡದ ನಟಸಾರ್ವಭೌಮ ಡಾ. ರಾಜ್‌ಕುಮಾರ್‌ರನ್ನು ಅಪಹರಣ ಮಾಡಿದ ಬಳಿಕ ವೀರಪ್ಪನ್ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳಿಗೆ ಭಾರೀ ತಲೆ ನೋವಾಗಿಬಿಟ್ಟಿದ್ದ. ನೂರು ದಿನಗಳ ಕಾಲ ರಾಜ್‌ಕುಮಾರ್‌ರನ್ನು ಒತ್ತೆ ಇಟ್ಟುಕೊಂಡಿದ್ದ ವೀರಪ್ಪನ್, ಅವರ ಬಿಡುಗಡೆಗೆ ಎಷ್ಟು ದುಡ್ಡು ಬೇಕೆಂದು ಬೇಡಿಕೆ ಇಟ್ಟಿದ್ದ ಎಂಬ ವಿಷಯ ಆಗಾಗ ಚರ್ಚೆಗೆ ಬರುತ್ತಲೇ ಇದೆ.
ಅಪಹರಣದ ವೇಳೆ ವೀರಪ್ಪನ್ ಜೊತೆಗೆ ಮಾತುಕತೆ ನಡೆಸಿದ ತಂಡವೊಂದರಲ್ಲಿದ್ದ ಪತ್ರಕರ್ತರೊಬ್ಬರು ಆಸಕ್ತಿಕರ ವಿಚಾರವೊಂದನ್ನು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ರಾಜ್‌ಕುಮಾರ್‌ರನ್ನು ಬಿಡುಗಡೆ ಮಾಡಲು ವೀರಪ್ಪನ್‌ಗೆ ಸರ್ಕಾರವು 15.22 ಕೋಟಿ ರೂ.ಗಳನ್ನು ನೀಡಿತ್ತು ಎಂದು ಪತ್ರಕರ್ತ ಶಿವಸುಬ್ರಮಣ್ಯಂ ಬರೆದಿದ್ದಾರೆ.
ಜುಲೈ 30, 2000ನೇ ತಾರೀಖಿನಂದು ರಾಜ್‌ಕುಮಾರ್‌ರನ್ನು ಗಾಜನೂರಿನ ಅವರ ನಿವಾಸದಿಂದ ಅಪಹರಿಸಿದ್ದ ವೀರಪ್ಪನ್, ಇದೇ ವೇಳೆ ರಾಜ್‌ಕುಮಾರ್ ಸಂಬಂಧಿಕರಾದ ಗೋವಿಂದರಾಜ್, ನಾಗೇಶ್ ಹಾಗೂ ನಾಗಪ್ಪರನ್ನೂ ಸಹ ಅಪಹರಿಸಲಾಗಿತ್ತು. ತಮಿಳುನಾಡು ಹಾಗೂ ಕರ್ನಾಟಕ ಸರ್ಕಾರಗಳ ಪರವಾಗಿ ನಕ್ಕೀರನ್ ಪತ್ರಿಕೆಯ ಸಂಪಾದಕ ಗೋಪಾಲ್‌ರನ್ನು ಮಲೆ ಮದೇಶ್ವರ ಬೆಟ್ಟದ ಕಾಡಿನ ಒಳಗೆ ಕಳುಹಿಸಿ ವೀರಪ್ಪನ್ ಜೊತೆಗೆ ಸಂಧಾನ ಏರ್ಪಡಿಸಲು ಯತ್ನಿಸಲಾಗಿತ್ತು.
ಹಲವು ಸುತ್ತಿನ ಸಂಧಾನದ ಮಾತುಕತೆಗಳ ಫಲವಾಗಿ 106 ದಿನಗಳ ಬಳಿಕ ರಾಜ್‌ಕುಮಾರ್‌ರನ್ನು ನವೆಂಬರ್ 13, 2000ನೇ ಇಸವಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ವೇಳೆ ಕೋಟ್ಯಂತರ ರೂಪಾಯಿಗಳು ಕೈಬದಲಾಗಿವೆ ಎಂದು ಎರಡೂ ರಾಜ್ಯಗಳಲ್ಲಿ ಸಾಕಷ್ಟು ಮಾತುಗಳು ಬಲ ಪಡೆದಿದ್ದವು. ಆದರೆ ಈ ವಿಚಾರವನ್ನು ಕರ್ನಾಟಕ ಸರ್ಕಾರ ಹಾಗೂ ರಾಜ್‌ಕುಮಾರ್ ಕುಟುಂಬಗಳು ನಿರಾಕರಿಸುತ್ತಲೇ ಬಂದಿವೆ.
BIG NEWS: ನೂತನ ಕೃಷಿ ಕಾಯ್ದೆ ಕುರಿತು ಮಹತ್ವದ ಹೇಳಿಕೆ ನೀಡಿದ ಪ್ರಧಾನಿ ಮೋದಿ
’ವೀರಪ್ಪನ್ ವಾಳಂತಾತುಮ್ ವೀಳಂತಾತುಮ್’ ಹೆಸರಿನ ಪುಸ್ತಕವೊಂದನ್ನು ಬಿಡುಗಡೆ ಮಾಡಿರುವ ಶಿವಸುಬ್ರಮಣ್ಯಂ, ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಕರ್ನಾಟಕ ಸರ್ಕಾರವು ಮೊದಲ ಕಂತಿನಲ್ಲಿ 10 ಕೋಟಿ ರೂ.ಗಳು ಹಾಗೂ ಎರಡನೇ ಕಂತಿನಲ್ಲಿ 5.22 ಕೋಟಿ ರೂಗಳನ್ನು ಕೊಟ್ಟಿರುವುದಾಗಿ ಹೇಳಿರುವ ಶಿವಸುಬ್ರಮಣ್ಯಂ, ಎರಡೂ ರಾಜ್ಯಗಳ ಜನರಿಗೆ ಈ ಸತ್ಯ ತಿಳಿದುಕೊಳ್ಳುವ ಹಕ್ಕಿದೆ ಎಂದಿದ್ದಾರೆ.
“ಹಣ ಸ್ವೀಕರಿಸಿದ ಬಳಿಕ ರಾಜ್‌ಕುಮಾರ್‌ರನ್ನು ಬಿಡುಗಡೆ ಮಾಡಿದ ವೀರಪ್ಪನ್, ಅವರನ್ನು ಡಿವಿಕೆ ಅಧ್ಯಕ್ಷ ಕೊಳತ್ತೂರು ಮಣಿ ಹಾಗೂ ತಮಿಳರ್ ದೇಸೀಯ ಮನುನ್ನಾಣಿ ಅಧ್ಯಕ್ಷ ಪಿ. ನೆಡುಮಾರನ್ ಕೈಗೆ ಹಸ್ತಾಂತರಿಸಿದ್ದ. ಆತನ ಬಿಡುಗಡೆಗೂ ಕೆಲ ದಿನಗಳ ಮುನ್ನ, ನವೆಂಬರ್ 10, 2020ರಂದು, ಕರ್ನಾಟಕದ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಜೊತೆಗೆ ಸ್ಯಾಟಲೈಟ್ ಫೋನ್‌ನಂತೆ ಕಂಡ ಡಿವೈಸ್‌ನಲ್ಲಿ ವೀರಪ್ಪನ್ ಮಾತನಾಡಿದ್ದ ಎಂದು ಶಿವಸುಬ್ರಮಣ್ಯಂ ತಿಳಿಸಿದ್ದಾರೆ.
“ಮೊದಲಿಗೆ, ವೀರಪ್ಪನ್ 1000 ಕೋಟಿ ರೂಗಳನ್ನು ಕೇಳಿದ್ದ — ಇದರಲ್ಲಿ 900 ಕೋಟಿ ರೂ.ಗಳಷ್ಟು ಚಿನ್ನದ ರೂಪದಲ್ಲಿ ಹಾಗೂ 100 ಕೋಟಿ ರೂ.ಗಳನ್ನು ನಗದಿನ ರೂಪದಲ್ಲಿ. ಆದರೆ ಹಲವು ಸುತ್ತಿನ ಸಂಧಾನದ ಬಳಿಕ 10 ಕೋಟಿ ರೂ.ಗಳಿಗೆ ಆತ ಒಪ್ಪಿಕೊಂಡಿದ್ದ” ಎಂದಿರುವ ಶಿವಸುಬ್ರಮಣ್ಯಂ, ಬಾನು ಎಂಬ ಕರ್ನಾಟಕ ಮೂಲದ ವೈದ್ಯರು ವೀರಪ್ಪನ್‌ನ ಕೈಗಳಿಗೆ ಆಗಿದ್ದ ಗಾಯಕ್ಕೆ ಔಷಧೋಪಚಾರ ಮಾಡಿದ್ದರು ಎಂದಿದ್ದಾರೆ.
ದುಡ್ಡಿನ ಹರಿದಾಟದ ವಿಚಾರಗಳನ್ನೆಲ್ಲಾ ತಳ್ಳಿ ಹಾಕಿರುವ ಗೋಪಾಲನ್, “ರಾಜ್‌ಕುಮಾರ್ ಬಿಡುಗಡೆ ವೇಳೆ ಹಣದ ಹರಿದಾಟ ಏನೂ ಆಗಿಲ್ಲ. ರಾಜ್‌ಕುಮಾರ್ ಕುಟುಂಬದ ಸದಸ್ಯರೂ ಸಹ ಇದನ್ನು ನಿರಾಕರಿಸಿದ್ದಾರೆ. ಶಿವಸುಬ್ರಮಣ್ಯಂ ನಮ್ಮ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿಲ್ಲ. ಈ ಪುಸ್ತಕ ಅವರ ಕಲ್ಪನೆಯ ಕೆಲಸ. ನನ್ನ ವಿರುದ್ಧ ಆತ ಮಾಡಿರುವ ಆಪಾದನೆಗಳೆಲ್ಲ ಸುಳ್ಳು” ಎಂದು ತಿಳಿಸಿದ್ದಾರೆ.
BIG NEWS: ಕೇಂದ್ರ ಸರ್ಕಾರದ ಸೂಚನೆಗೂ ನಿರ್ಲಕ್ಷ…! ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಗೆ ಎದುರಾಯ್ತು ಸಂಕಷ್ಟ
ಈ ಬಗ್ಗೆ ಮಾತನಾಡಿದ ಕೊಳತ್ತೂರು ಮಣಿ, “ವೀರಪ್ಪನ್ 10 ಕೋಟಿ ಪಡೆದುಕೊಂಡಿದ್ದ ಎಂದು ನಮಗೆ ತಿಳಿದು ಬಂದಿತ್ತು. ಆದರೆ 5.22 ಕೋಟಿ ರೂ.ಗಳ ಅಂತಿಮ ಸೆಟಲ್‌ಮೆಂಟ್ ಬಗ್ಗೆ ನಮಗೆ ಗೊತ್ತಿಲ್ಲ. ದುಡ್ಡು ಪಡೆದ ಬಳಿಕವೂ ರಾಜ್‌ಕುಮಾರ್‌ರನ್ನು ಬಿಡುಗಡೆ ಮಾಡಲು ವೀರಪ್ಪನ್ ನಿರಾಕರಿಸಿದ ಬಳಿಕ ಈ ವಿಚಾರದಲ್ಲಿ ನಾವೂ ಸಹ ತಲೆ ಹಾಕಿದೆವು. ಹಣದ ವರ್ಗಾವಣೆಯಲ್ಲಿ, ನೇರವಾಗಿ ಅಥವಾ ಪರೋಕ್ಷವಾಗಿ ನಾವು ಭಾಗಿಯಾಗಿಲ್ಲ” ಎಂದಿದ್ದಾರೆ.
“ಡಾ. ಭಾನು ಅವರು ವೀರಪ್ಪನ್‌ಗೆ ಶುಶ್ರೂಷೆ ಮಾಡಿದರು ಎಂಬುದು ನಿಜ. ಆದರೆ ವೀರಪ್ಪನ್‌ಗೆ ಕೊಟ್ಟಿದ್ದು ಸ್ಯಾಟಲೈಟ್ ಫೋನ್ ಅಲ್ಲ. ಮೊಬೈಲ್ ಫೋನ್‌ಗೆ ಸಿಗ್ನಲ್ ವರ್ಧಿಸಲೆಂದು ಆಂಟೆನಾವೊಂದನ್ನು ಬೆಂಗಳೂರಿನಿಂದ ವೀರಪ್ಪನ್‌ನ ಅಡಗುದಾಣಕ್ಕೆ ತೆಗೆದುಕೊಂಡು ಹೋಗಲಾಗಿತ್ತು. ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಜೊತೆಯಲ್ಲಿ ವೀರಪ್ಪನ್ ಮಾತನಾಡಿದನೂ ಇಲ್ಲವೋ ಎಂಬುದು ನಮಗೆ ಗೊತ್ತಿಲ್ಲ. ಆತ ಹಾಗೆ ಮಾಡಿದ್ದರೂ ಸಹ ನಮ್ಮ ಎದುರಿಗೆ ಮಾಡಿಲ್ಲ” ಎಂದು ತಮ್ಮಅಭಿಪ್ರಾಯ ಸೇರಿಸಿದ್ದಾರೆ.
ದುಡ್ಡಿನ ಯಾವುದೇ ವ್ಯವಹಾರ ನಡೆದಿರಲಿಲ್ಲ ಎಂದು ತಿಳಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ, “ಇದರಲ್ಲಿ ಯಾವುದೇ ಸತ್ಯವಿಲ್ಲ. ಇಂಥ ಒಂದು ಚರ್ಚೆ ಸಹ ನಡೆದಿರಲಿಲ್ಲ” ಎಂದಿದ್ದಾರೆ.