alex Certify ಕೇವಲ 5 ನಿಮಿಷದಲ್ಲಿ ಕೊರೋನಾ ಪರೀಕ್ಷೆ: ಸೋಂಕು ತಡೆಯುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 5 ನಿಮಿಷದಲ್ಲಿ ಕೊರೋನಾ ಪರೀಕ್ಷೆ: ಸೋಂಕು ತಡೆಯುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ

ಬೆಂಗಳೂರು: ರಾಜ್ಯ ಜೈವಿಕ ತಂತ್ರಜ್ಞಾನ ಇಲಾಖೆಯ ಬೆಂಗಳೂರು ಬಯೋ ಇನೋವೇಷನ್‌ ಸೆಂಟರ್‌ ನಲ್ಲಿರುವ 45 ಸ್ಟಾರ್ಟ್ಅಪ್ ಗಳು ಕೊವಿಡ್ ಸೋಂಕಿಗೆ ಔಷಧ ಕಂಡುಹಿಡಿಯುವ‌‌‌ ಮತ್ತು ತ್ವರಿತವಾಗಿ ಸೋಂಕು ಪತ್ತೆ ಪರೀಕ್ಷೆಗಳನ್ನು ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಅವಿರತ ಶ್ರಮ ಹಾಕುತ್ತಿದ್ದು ಅಂತಹ ಕೆಲವು ಸಂಸ್ಥೆಗಳ ಪ್ರತಿನಿಧಿಗಳ ಜತೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಸಂವಾದ‌ ನಡೆಸಿ, ಬೆಂಬಲ ಸೂಚಿಸಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇರುವ ‘ಬೆಂಗಳೂರು ಬಯೋ ಇನೋವೇಷನ್‌ ಸೆಂಟರ್‌’ಗೆ ಗುರುವಾರ ಭೇಟಿ ನೀಡಿದ ಅವರು, ಕೊವಿಡ್ ಟೆಸ್ಟ್‌ ಹಾಗೂ ಕೊವಿಡ್ ಔಷಧ ಅನ್ವೇಷಣೆ ಕಾರ್ಯದಲ್ಲಿ ತೊಡಗಿರುವ ಸಂಶೋಧಕರ ಜತೆ  ಸಂವಾದ ನಡೆಸಿದರಲ್ಲದೆ, ಎಸ್‌ಎನ್‌ ಲೈಫ್‌ಸೈನ್ಸಸ್‌, ಸ್ವ್ಯಾಬ್‌ ಮಾದರಿಯಿಂದ ಆರ್‌ಎನ್‌ಎ ಬೇರ್ಪಡಿಸುವ  ಪ್ರೋಗ್ರಾಂಬಲ್‌ ರೊಬೊಟಿಕ್‌ ಯಂತ್ರವನ್ನು ಉದ್ಘಾಟಿಸಿದ್ದಾರೆ.

ಕೊವಿಡ್ ಸೋಂಕಿಗೆ ಔಷಧ ಕಂಡುಹಿಡಿಯುವುದರ ಜತೆಗೆ ಕಡಿಮೆ ವೆಚ್ಚದಲ್ಲಿ ಮತ್ತು ತ್ವರಿತವಾಗಿ ಸೋಂಕು ಪತ್ತೆ ಮಾಡುವುದು ನಮ್ಮ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಕೆಲವು ಸ್ಟಾರ್ಟ್ ಅಪ್ ಗಳು ಕ್ಲಿನಿಕಲ್ ಟೆಸ್ಟ್ ಹಂತದಲ್ಲಿದ್ದರೆ, ಇನ್ನು ಕೆಲವು ಸಂಶೋಧನೆ ಮುಗಿಸಿ ನಿಯಂತ್ರಣ ಪ್ರಾಧಿಕಾರಗಳ ಒಪ್ಪಿಗೆಗಾಗಿ ಕಾಯುತ್ತಿವೆ. ಒಟ್ಟಿನಲ್ಲಿ ಕರ್ನಾಟಕದ ಸಂಸ್ಥೆಗಳು ಈ ಸೋಂಕಿನ ವಿರುದ್ಧ ಹೋರಾಡಲು ಜಗತ್ತಿಗೆ ಪರಿಹಾರ ಸೂಚಿಸುತ್ತಿರುವುದು‌ ನಿಜಕ್ಕೂ ಖುಷಿಯ ವಿಚಾರ ಎಂದು ಹೇಳಿದ್ದಾರೆ.

5 ನಿಮಿಷದ ಪರೀಕ್ಷೆ

ಜೈವಿಕ ತಂತ್ರಜ್ಞಾನ ಕ್ಷೇತ್ರದ ಕಂಪನಿಯೊಂದು ಕೇವಲ 5 ನಿಮಿಷದಲ್ಲಿ ಕೊವಿಡ್ ಸೋಂಕು ಪರೀಕ್ಷೆ ಮಾಡುವ ಯಂತ್ರ ಸಿದ್ಧಪಡಿಸಿದ್ದರೆ, ಮತ್ತೊಂದು ಕಂಪನಿ ಸೋಂಕು ಪತ್ತೆ ಜತೆಗೆ ಸ್ಯಾಂಪಲ್ ಅನ್ನು ತಕ್ಷಣವೇ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಯಂತ್ರ ಸಂಶೋಧಿಸಿದೆ. ಅದೇ ರೀತಿ ಹಲವು ಕಂಪನಿಗಳು ನಾನಾ ರೀತಿಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿವೆ.

ಈಗಾಗಲೇ ಸೋಂಕು ಪತ್ತೆ ತಂತ್ರಜ್ಞಾನ ಅಭಿವೃದ್ಧಿಪಡಿಸಿರುವ ಕಂಪನಿಗಳು ಪ್ರಾಣಿಗಳ ಮೇಲೆ ಪ್ರಯೋಗ ಮಾಡಿ ಯಶಸ್ಸು ಸಾಧಿಸಿದ್ದು, ಇದೀಗ ಕೊವಿಡ್ ಸೋಂಕು ಪರೀಕ್ಷೆಗೆ ಸೋಂಕಿತರ ಗಂಟಲು ದ್ರವ ನೀಡುವಂತೆ ಕೇಳಿಕೊಂಡಿವೆ. ಈ ಪ್ರಯೋಗ ಯಶಸ್ವಿಯಾದರೆ ಸ್ಥಳೀಯವಾಗಿ ಸಿದ್ಧಪಡಿಸಿದ ತಂತ್ರಜ್ಞಾನದಿಂದಲೇ ಸೋಂಕು ಪತ್ತೆ ಮಾಡಬಹುದು ಎಂದು ಹೇಳಿವೆ. ಆದರೆ, ಪಾಸಿಟಿವ್ ಬಂದಿರುವ ರೋಗಿಯ ಗಂಟಲು ದ್ರವವನ್ನು ಸಂಗ್ರಹಿಸುವುದು ಮತ್ತು ಪ್ರಯೋಗದ ಬಳಿಕ ವಿಲೇವಾರಿ ಮಾಡುವುದು ಅತ್ಯಂತ ಸವಾಲಿನ ಕೆಲಸ. ಇದಕ್ಕೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕಾಗಿದೆ. ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಕಂಪನಿಗೆ ಅಗತ್ಯವಿರುವ ಗಂಟಲು ದ್ರವ ಮಾದರಿಯನ್ನು ಒದಗಿಸುವ ಕುರಿತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸಮಿತಿ ರಚನೆ

ಸ್ಟಾರ್ಟ್ಅಪ್ ಕಂಪನಿಗಳು ಇನ್ನಷ್ಟು ಪರಿಣಾಕಾರಿಯಾಗಿ ತಮ್ಮ ಸಂಶೋಧನಾ ಕಾರ್ಯ ಮುಂದುವರಿಸಲು ಸರ್ಕಾರದಿಂದಲೂ ಸಾಕಷ್ಟು ಸಹಕಾರ ಬೇಕು. ಈ ಹಿನ್ನೆಲೆಯಲ್ಲಿ ಕಂಪನಿಗಳು ಮತ್ತು ಸರ್ಕಾರದ ಮಧ್ಯೆ ಸಮನ್ವಯ ಸಾಧಿಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗುವುದು. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಸ್ಥಳದಲ್ಲೇ ಇದ್ದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ ಅವರಿಗೆ ಸೂಚಿಸಿದ್ದಾರೆ.

ಒಂದೇ ಬಾರಿಗೆ 8 ಮಾದರಿ ಪರೀಕ್ಷೆ

ಎಸ್‌ಎನ್‌ ಲೈಫ್‌ಸೈನ್ಸ್‌ ಪ್ರೋಗ್ರಾಂಬಲ್‌ ರೊಬೊಟಿಕ್‌ ಯಂತ್ರವು ಕಫ/ಸ್ವ್ಯಾಬ್‌ಗಳ ಕ್ಲಿನಿಕಲ್‌ ಮಾದರಿಯ ಆರ್‌ಎನ್‌ಎ ಪ್ರತ್ಯೇಕಿಸುವ ಕೆಲಸ ಮಾಡುತ್ತದೆ.  ಏಕಕಾಲದಲ್ಲಿ 8 ಮಾದರಿಗಳ ಟೆಸ್ಟ್‌ ಮಾಡುವುದು ಈ ಯಂತ್ರದ ವಿಶೇಷತೆ. ಜತೆಗೆ ಪ್ರತಿ ಮಾದರಿಯ ಆರ್‌ಎನ್‌ಎ ಪ್ರತ್ಯೇಕಿಸುವ ವೆಚ್ಚವು 500 ರೂ. ನಿಂದ 150 ರೂ.ಗೆ ಇಳಿಕೆಯಾಗಲಿದೆ ಎಂದು ಹೇಳಿದ್ದಾರೆ.

ಎಸ್‌ಎನ್‌ ಲೈಫ್‌ಸೈನ್ಸಸ್‌, ನಿಯೋಮ್‌ ಟೆಕ್ನಾಲಜಿಸ್‌ ಪ್ರೈವೇಟ್ ಲಿಮಿಟೆಡ್, ಹೈಬ್ರಿನೋಮಿಕ್ಸ್ ಲೈಫ್ ಸೈನ್ಸಸ್ ಅಂಡ್ ಡಯಾಗ್ನಾಸ್ಟಿಕ್ಸ್ ಎಲ್ಎಲ್ಪಿ (ಹೆಚ್ಎಲ್ಡಿ) ಹಾಗೂ ಗೆಲೊರಿ ಟಿಎಕ್ಸ್ ಫಾರ್ಮಾಸಿಟಿಕಲ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯವರು ತಮ್ಮ ಸಂಶೋಧನೆಗೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆಗಳನ್ನು ನೀಡಿದರು. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ಬಿಬಿಸಿ ಎಂ.ಡಿ ಡಾ.ಜಿತೇಂದ್ರ ಕುಮಾರ್, ಡಾ.ಶರತ್ ಚಂದ್ರ, ವಿಶಾಲ ರಾವ್ ಸೇರಿದಂತೆ ಇತರ ವಿಜ್ಞಾನಿಗಳು ಹಾಜರಿದ್ದರು.

ಸಭೆ ಬಳಿಕ‌ ಡಿಸಿಎಂ ಅಶ್ವಥ್ ನಾರಾಯನ್ ಸೆಂಟರ್ ಫಾರ್ ಹೂಮನ್ ಜೆನೆಟಿಕ್ಸ್ ಮತ್ತು ಬಯೊ ಇನ್ಫಾರ್ಮೇಟಿಕ್ಸ್ ಮತ್ತು ಅನ್ವಯಿಕ ಜೈವಿಕ ತಂತ್ರಜ್ಞಾನ ಸಂಸ್ಥೆ ಗೆ ಭೇಟಿ‌ ನೀಡಿ ಪ್ರಯೋಗಾಲಯಗಳನ್ನು ವೀಕ್ಷಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...