ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ತಾಂತ್ರಿಕ ಸಲಹಾ ಸಮಿತಿ ಮತ್ತು ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯ ಕ್ಲಿನಿಕಲ್ ತಜ್ಞರ ಸಮಿತಿಗಳ ಸಂಯುಕ್ತ ತಜ್ಞರ ಸಮಿತಿ ಸಭೆ ಕೊರೊನಾಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರಕ್ಕೆ ಮಹತ್ವದ ಶಿಫಾರಸು ಮಾಡಿದೆ.
ಕೊರೊನಾ ಸೋಂಕು ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ವೇಗದಲ್ಲಿ ಹರಡುತ್ತಿರುವ ಹಿನ್ನಲೆಯಲ್ಲಿ ಪ್ರಯೋಗ ಶಾಲಾ ಪರೀಕ್ಷೆಗಳ ಸಂಖ್ಯೆಯನ್ನು 75 ಸಾವಿರದಿಂದ 1 ಲಕ್ಷದಷ್ಟು ಹೆಚ್ಚಿಸಲು ಸೂಚಿಸಲಾಗಿದೆ. ರಾಜ್ಯವು ಶೇಕಡ 12 ರಷ್ಟು ಹೆಚ್ಚಿನ ಪರೀಕ್ಷೆ ದೃಢಪಟ್ಟ ಪ್ರಮಾಣ ಹೊಂದಿದ್ದು ತುರ್ತು ಅಗತ್ಯ ಇರುವ ಸೋಂಕಿತರಿಗೆ ಶೀಘ್ರವೇ ಚಿಕಿತ್ಸೆ ಮತ್ತು ರೋಗ ತೀವ್ರತೆ ತಡೆಗಟ್ಟಲು ಕ್ರಮ ಕೈಗೊಳ್ಳುವ ಕುರಿತು ಮಹತ್ವದ ಸಲಹೆ ನೀಡಲಾಗಿದೆ.
ಸುಲಭವಾಗಿ ರೋಗಕ್ಕೆ ತುತ್ತಾಗುವ ಜನಸಮುದಾಯ ಮತ್ತು ಗಂಡಾಂತರದಲ್ಲಿರುವ ಗುಂಪುಗಳ ಪರೀಕ್ಷೆಗೆ ಆದ್ಯತೆ ನೀಡಲು ತಜ್ಞರ ಸಮಿತಿ ಸಲಹೆ ನೀಡಿದ್ದು ಪರೀಕ್ಷೆಗಳನ್ನು ಹಂತಹಂತವಾಗಿ ಹೆಚ್ಚಿಸಲು ತಿಳಿಸಲಾಗಿದೆ.
ಅಲ್ಲದೆ, ಕೊರೊನಾ ಕುರಿತಂತೆ ಜನಸಮುದಾಯದಲ್ಲಿ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಜನರಿಗೆ ಸಮುದಾಯ ಮಾಧ್ಯಮಗಳ ಮೂಲಕ ಆರೋಗ್ಯ ಶಿಕ್ಷಣ ನೀಡಲು ತಜ್ಞರ ಸಮಿತಿ ಸಲಹೆ ನೀಡಿದೆ.
ಸಭೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ ಉಪಕುಲಪತಿ ಡಾ. ಎಸ್ ಸಚ್ಚಿದಾನಂದ, ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್, ಡಾ. ಎಂ.ಕೆ. ಸುದರ್ಶನ್, ಡಾ.ವಿ. ರವಿ, ಡಾ. ಗುರುರಾಜ್ ಜಿ., ಡಾ. ಗಿರಿಧರ್ ಬಾಬು, ಡಾ. ಅನಿತಾ ದೇಸಾಯಿ, ಡಾ. ಶಶಿಭೂಷಣ್ ಬಿ.ಎಲ್., ಡಾ.ಎನ್. ಗಿರೀಶ್, ಡಾ. ಆಶೀಶ್ ಸತ್ಪತಿ, ಡಾ. ಮೊಹಮ್ಮದ್ ಶರೀಫ್, ಡಾ. ಲೋಕೇಶ್ ಅಲಹಾರಿ ಭಾಗವಹಿಸಿದ್ದರು.