ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಮಿತಿಮೀರುತ್ತಲೇ ಇದೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ದೆಹಲಿಯಲ್ಲಿ ಕೇಳಿ ಬರ್ತಿದ್ದ ಆಕ್ಸಿಜನ್ ಹಾಗೂ ರೆಮಿಡಿಸಿವರ್ ಕೊರತೆಯ ಪರಿಸ್ಥಿತಿ ಇದೀಗ ರಾಜ್ಯದಲ್ಲೂ ಉಂಟಾಗಿದೆ. ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ಈಗಾಗಲೇ ಚಾಮರಾಜನಗರದಲ್ಲಿ 23, ಕಲಬುರಗಿಯಲ್ಲಿ 4 ಹಾಗೂ ಬೆಂಗಳೂರಿನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಕೇವಲ ವೈದ್ಯಕೀಯ ಆಮ್ಲಜನಕ ಮಾತ್ರವಲ್ಲದೇ ಕೊರೊನಾ ವಿರುದ್ಧದ ಚಿಕಿತ್ಸೆಯಲ್ಲಿ ಮಹತ್ವವಾಗಿ ಬಳಕೆಯಾಗಲ್ಪಡುವ ರೆಮಿಡಿಸಿವರ್ ಚುಚ್ಚುಮದ್ದಿಗೂ ರಾಜ್ಯದಲ್ಲಿ ಅಭಾವ ಉಂಟಾಗಿದೆ.
ರಾಜ್ಯದಲ್ಲಿ ಉಂಟಾಗಿರುವ ಈ ಸಂಕಷ್ಟದ ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡಿರುವ ಸಿಎಂ ಯಡಿಯೂರಪ್ಪ ಸಂಪುಟ ಸಭೆಗೂ ಮುನ್ನ ಮತ್ತೊಂದು ಸಭೆಯನ್ನ ನಡೆಸಲು ನಿರ್ಧರಿಸಿದ್ದಾರೆ. ಈ ಸಭೆಯಲ್ಲಿ ರಾಜ್ಯದಲ್ಲಿ ರೆಮಿಡಿಸಿವರ್ ವಿತರಣೆ ಕುರಿತಂತೆ ಸಿಎಂ ಔಷಧಿ ಕಂಪನಿಗಳ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.
ಮಧ್ಯಾಹ್ನ 1 ಗಂಟೆಗೆ ಕಾವೇರಿಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಸಿಎಂ ಯಡಿಯೂರಪ್ಪ ರಾಜ್ಯದಲ್ಲಿ ರೆಮಿಡಿಸಿವರ್ ಪೂರೈಕೆ ಕುರಿತಂತೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಅಲ್ಲದೇ ಈ ಸಂಬಂಧ ಕೇಂದ್ರ ಸರ್ಕಾರದ ಮೇಲೂ ರಾಜ್ಯದಿಂದ ಒತ್ತಡ ಹೇರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.