ಚೆನ್ನೈ: ನಾಲ್ಕು ವರ್ಷಗಳ ಸೆರೆವಾಸದ ಬಳಿಕ ಮಾಜಿ ಸಿಎಂ ದಿ.ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ತಮಿಳುನಾಡಿಗೆ ಆಗಮಿಸುತ್ತಿದ್ದು, ಇದರ ಬೆನ್ನಲ್ಲೇ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಯಾಗಿದೆ.
ಶಶಿಕಲಾ ತಮಿಳುನಾಡಿಗೆ ಎಂಟ್ರಿಕೊಡುವ ಮೊದಲೇ ಎಐಎಡಿಎಂಕೆಯ ಮೂವರು ಸಚಿವರ ಜೊತೆ ಫೋನ್ ನಲ್ಲಿ ಮಾತನಾಡಿದ್ದಾರೆ. ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಕಳೆದ ಎರಡು ದಿನಗಳ ಹಿಂದಷ್ಟೇ ಚಿನ್ನಮ್ಮ ಶಾಸಕರು ಹಾಗೂ ಸಚಿವರ ಜೊತೆಯೂ ಚರ್ಚಿಸಿದ್ದರು. ಶಶಿಕಲಾ ಪರ ಒಟ್ಟು 50 ಶಾಸಕರು ಇದ್ದಾರೆ ಎಂಬ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಎಐಎಡಿಎಂಕೆಯಲ್ಲಿ ನಡುಕವುಂಟಾಗಿದ್ದು, ಎಐಎಡಿಎಂಕೆ ಮುಖಂಡರು ಎಲ್ಲ ಸಚಿವ, ಶಾಸಕರನ್ನು ಕರೆದು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಶಶಿಕಲಾ ಬೆಂಬಲಿಗರ ಕಾರು ಬೆಂಕಿಗಾಹುತಿ
ಇನ್ನು ಅಮ್ಮ ಜಯಲಲಿತಾ ಮಾದರಿಯಲ್ಲೇ ಚಿನ್ನಮ್ಮ ತಮಿಳುನಾಡಿಗೆ ಎಂಟ್ರಿ ಕೊಟ್ಟಿದ್ದು, ಅಂದು ಜಯಲಲಿತಾ ಪರಪ್ಪನ ಅಗ್ರಹಾರದಿಂದ ತೆರಳಿದ್ದ ವೇಳೆ ದಾರಿಯುದ್ದಕ್ಕೂ ಹೂಮಳೆ, ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮದಿಂದ ಬರಮಾಡಿಕೊಂಡಿದ್ದರು. ಅದೇ ಮಾದರಿಯಲ್ಲಿ ಇಂದು ಶಶಿಕಲಾ ಅವರಿಗೆ ರಸ್ತೆಯುದ್ದಗಲಕ್ಕೂ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ನೆರೆದಿದ್ದು, ಚಿನ್ನಮ್ಮನ ವಾಹನದ ಮೇಲೆ ಹೂಮಳೆ ಸುರಿದು, ಜಯಘೋಷಗಳನ್ನು ಕೂಗಿ ಬರಮಾಡಿಕೊಳ್ಳುತ್ತಿದ್ದಾರೆ.