ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಲಸಿಕೆ ಕೊರತೆ ಎದುರಾಗಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಕಾರ್ಯದರ್ಶಿ ರವಿಕುಮಾರ್, ಕರ್ನಾಟಕ ಮಾತ್ರವಲ್ಲ ದೇಶದ ಹಲವು ರಾಜ್ಯಗಳಲ್ಲಿ ವ್ಯಾಕ್ಸಿನ್ ಕೊರತೆ ಎದುರಾಗಿದೆ. ಹಾಗಾಗಿ ಹೊಸದಾಗಿ ಯಾರಿಗೂ ಲಸಿಕೆ ಕೊಡುತ್ತಿಲ್ಲ ಎಂದು ಹೇಳಿದ್ದಾರೆ.
ನಮ್ಮ ಬಳಿ ಲಸಿಕೆ ಲಭ್ಯವಿದ್ದರೆ ಜನರಿಗೆ ಕೊಡುತ್ತಿದ್ದೆವು. ಆದರೆ ಲಸಿಕೆಯೇ ಲಭ್ಯವಿಲ್ಲದಿರುವಾಗ ಪೂರೈಸುವುದು ಹೇಗೆ? ರಾಜ್ಯಕ್ಕೆ 6 ಕೋಟಿ ಡೋಸ್ ಲಸಿಕೆ ಅಗತ್ಯವಿದೆ. ರಾಜ್ಯ ಸರ್ಕಾರ 3 ಕೋಟಿ ಲಸಿಕೆಗೆ ಬೇಡಿಕೆ ಇಟ್ಟಿದೆ. ಪ್ರಸ್ತುತ 8 ಲಕ್ಷ ಡೋಸ್ ಮಾತ್ರ ಕೇಂದ್ರ ಸರ್ಕಾರದಿಂದ ಪೂರೈಕೆಯಾಗಿದೆ ಎಂದರು.
ಕೊರೊನಾ ಸೋಂಕಿನ ಮಧ್ಯೆ ಖುಷಿ ಸುದ್ದಿ…! ಭಾರತದಲ್ಲೂ 2 ವರ್ಷ ಮೇಲ್ಪಟ್ಟವರಿಗೆ ಶೀಘ್ರವೇ ಸಿಗಲಿದೆ ಲಸಿಕೆ
ರಾಜ್ಯದ 200 ಕೇಂದ್ರಗಳಲ್ಲಿ ಲಸಿಕೆ ಸಂಗ್ರಹಕ್ಕೆ ಸಿದ್ಧತೆ ನಡೆಸಲಾಗಿದೆ. ಪ್ರತಿ 15 ದಿನಕ್ಕೆ 15 ಲಕ್ಷ ಲಸಿಕೆ ಪೂರೈಸುವುದಾಗಿ ಕೇಂದ್ರ ಭರವಸೆ ನೀಡಿದೆ. ಸ್ಪುಟ್ನಿಕ್ ಲಸಿಕೆ ಬರುವರೆಗೂ ದೇಶದಲ್ಲಿ ವ್ಯಾಕ್ಸಿನ್ ಕೊರತೆ ಇದ್ದೇ ಇರುತ್ತದೆ. ನಾವೂ ಕೂಡ ಬೇರೆ ದೇಶಗಳ ಲಸಿಕೆ ಆಮದಿಗೆ ಬೇಡಿಕೆ ಇಟ್ಟಿದ್ದೇವೆ ಕಂಪನಿಗಳು ಜುಲೈ ವೇಳೆಗೆ ಲಸಿಕೆ ಪೂರೈಸುವ ಭರವಸೆ ನೀಡಿವೆ.
ಉತ್ಪಾದನೆಯಾಗಿರುವ ಲಸಿಕೆಯಲ್ಲಿ ಶೇ.50ರಷ್ಟು ಕೇಂದ್ರ ಸರ್ಕಾರಕ್ಕೆ ನೀಡಬೇಕು. ಉಳಿದ ಶೇ.50 ರಷ್ಟು ಲಸಿಕೆಯಲ್ಲಿ ರಾಜ್ಯ ಸರ್ಕಾರಗಳು ಹಾಗೂ ಖಾಸಗಿ ಕಂಪನಿಗಳಿಗೆ ನೀಡಲಾಗುತ್ತಿದೆ. ಹೀಗಾಗಿ ಲಸಿಕಾ ಕಂಪನಿಗಳಿಗೆ ವ್ಯಾಕ್ಸಿನ್ ಉತ್ಪಾದನೆ ಮಾಡಲು ಸಮಯ ಬೇಕು. ಹಾಗಾಗಿ ಜುಲೈವರೆಗೆ ಕಾಯಲೇ ಬೇಕಾದ ಅನಿವಾರ್ಯತೆ ಇದೆ ಅಲ್ಲಿಯವರೆಗೂ ಸಮಸ್ಯೆಯಾಗಲಿದೆ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ.