ಬೆಂಗಳೂರು: ರಾಜಧಾನಿ ಬೆಂಗಳೂರಿನ ಪಬ್ ಗಳ ವಿರುದ್ಧ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಲಿಕಾನ್ ಸಿಟಿ ಪಬ್ ಗಳಲ್ಲಿ ಕನ್ನಡ ಹಾಡುಗಳಿಗೆ ಆದ್ಯತೆ ನೀಡುತ್ತಿಲ್ಲ ಎಂದು ಗುಡುಗಿರುವ ಚಂದನ್ ಶೆಟ್ಟಿ ಪಬ್ ಗಳ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ.
ಮಾರತ್ ಹಳ್ಳಿಯಲ್ಲಿರುವ ಬ್ಲಾಕ್ ಪರ್ಲ್ ಪಬ್ ನಲ್ಲಿ ಕೆಲ ಕನ್ನಡಿಗರು ಕನ್ನಡ ಹಾಡುಗಳನ್ನು ಹಾಕುವಂತೆ ಕೋರಿದ್ದರು. ಆದರೆ ಇದಕ್ಕೆ ಪಬ್ ಸಿಬ್ಬಂದಿ ನಿರಾಕರಿಸಿದ್ದಾರೆ. ಈ ವಿಚಾರ ಚಂದನ್ ಶೆಟ್ಟಿ ಗಮನಕ್ಕೆ ಬಂದಿದ್ದು, ಇದೀಗ ಪಬ್ ಗಳ ಈ ವರ್ತನೆ ವಿರುದ್ಧ ಚಂದನ್ ಶೆಟ್ಟಿ ಸಿಡಿದೆದ್ದಿದ್ದಾರೆ. ಸಿಲಿಕಾನ್ ಸಿಟಿಯಲ್ಲಿರುವ ಪಬ್ ಮಾಲೀಕರು ಕನ್ನಡಿಗರೇ ಅಲ್ಲ, ಅವರಿಗೆ ಪಬ್ ನಡೆಸಲು ಮಾತ್ರ ಇಲ್ಲಿ ಜಾಗ ಬೇಕು ನಾವು ಕನ್ನಡ ಹಾಡು ಮಾತ್ರ ಹಾಕಬೇಕು ಎಂದು ತಾಕೀತು ಮಾಡಿಲ್ಲ, ಬದಲಾಗಿ ಕನ್ನಡದ ಹಾಡುಗಳನ್ನೂ ಪ್ರಸಾರ ಮಾಡಿ ಎಂದು ಹೇಳಿದ್ದೇವೆ ಎಂದಿದ್ದಾರೆ.
ಸಿನಿಮಾ ಹಾಡನ್ನ ಹಾಡಿದೆ ಈ ಮುದ್ದಾದ ಶ್ವಾನ..!
ಬ್ಲಾಕ್ ಪರ್ಲ್ ಪಬ್ ವಿರುದ್ಧ ಹೋರಾಟಕ್ಕೆ ಮುಂದಾಗಿರುವ ಚಂದನ್ ಶೆಟ್ಟಿಗೆ ಕರವೇ ಕಾರ್ಯಕರ್ತರು ಬೆಂಬಲ ನೀಡಿದ್ದು, ಈಗಾಗಲೇ ಪಬ್ ಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಕನ್ನಡ ಹಾಡು ಪ್ರಸಾರ ಮಾಡಲ್ಲ ಎಂದಿರುವ ಪಬ್ ಗೆ ಭೇಟಿ ನೀಡಿರುವ ಕನ್ನಡಪರ ಸಂಘಟನೆ ಕಾರ್ಯಕರ್ತರು ಪಬ್ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಇನ್ಮುಂದೆ ಕನ್ನಡ ಹಾಡು ಪ್ರಸಾರ ಮಾಡುವುದಾಗಿ ಆಡಳಿತ ಮಂಡಳಿ ಭರವಸೆ ನೀಡಿದೆ ಎಂದು ತಿಳಿದು ಬಂದಿದೆ.