ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಆರೋಗ್ಯ ಸಚಿವ ಸುಧಾಕರ್ ಅವರ ಏಕಪತ್ನಿ ವ್ರತಸ್ಥ ಹೇಳಿಕೆ ಈಗಾಗಲೇ ಬೆಂಕಿ ಹೊತ್ತಿಸಿದ್ದು, ಇದರ ಬೆನ್ನಲ್ಲೇ ಸಚಿವರು ಮತ್ತೊಂದು ಟ್ವೀಟ್ ಮಾಡಿದ್ದು, ಇನ್ನಷ್ಟು ಚರ್ಚೆಗೆ ಗ್ರಾಸವಾಗಿದೆ.
ನನ್ನ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳಬೇಕಾದ ಮಹಾನಾಯಕರುಗಳು ಅರ್ಥ ಮಾಡಿಕೊಂಡರೆ ಸಾಕು. ಇಡೀ ರಾಜ್ಯದ ಜನರನ್ನು ತಪ್ಪು ದಾರಿಗೆ ಎಳೆದು ರಾಜಕೀಯ ದ್ವೇಷ ಸಾಧಿಸಲು ಹೊರಟಿರುವ ಮಹಾನಾಯಕರ ಮುಖವಾಡ ಕಳಚುವ ಉದ್ದೇಶ ನನ್ನ ಹೇಳಿಕೆಯ ಹಿಂದೆ ಇತ್ತು ಅಷ್ಟೇ. ನಮ್ಮ ತೇಜೋವಧೆ ಮಾಡಲು ಹೊರಟವರ ಉದ್ದೇಶ ಈಡೇರಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಏಕಪತ್ನಿ ವ್ರತಸ್ಥ ಹೇಳಿಕೆ: ಸಚಿವ ಸುಧಾಕರ್ ನುಡಿಮುತ್ತುಗಳ ಬಗ್ಗೆ ಡಿ.ಕೆ. ಶಿವಕುಮಾರ್ ತಿರುಗೇಟು
ರಾಜ್ಯದ 225 ಶಾಸಕರ ವಿರುದ್ಧವೂ ತನಿಖೆಯಾಗಿ ಯಾರ ಬಂಡವಾಳ ಏನೆಂಬುದು ಹೊರಬರಲಿ ಎಂದು ಸಚಿವ ಸುಧಾಕರ್ ನೀಡಿದ್ದ ಹೇಳಿಕೆ ಇದೀಗ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಅಗ್ನಿಪರೀಕ್ಷೆಗೆ ಕಾರಣವಾಗಿದೆ. 225 ಶಾಸಕರ ವಿರುದ್ಧ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಲಿ ಎಂದು ಕಾಂಗ್ರೆಸ್ ನಾಯಕರು ಸಿಎಂ ಗೆ ಆಗ್ರಹಿಸಲು ನಿರ್ಧರಿಸಿದ್ದಾರೆ. ಜೊತೆಗೆ ಶಾಸಕರ ಸಹಿ ಸಂಗ್ರಹಕ್ಕೆ ಕಾಂಗ್ರೆಸ್ ನಾಯಕರು ಸಿದ್ಧತೆ ನಡೆಸಿದ್ದಾರೆ.