ವರ್ಷಾನುಗಟ್ಟಲೇ ಕಾಲೇಜು ಹಾಸ್ಟೆಲ್ನಲ್ಲಿ ನೆಲೆಸಿ ಬಳಿಕ ಅದನ್ನ ಖಾಲಿ ಮಾಡಿಕೊಂಡು ಲಗೇಜ್ ಸಮೇತ ಮನೆಗೆ ಹೋಗೋದು ಅಂದರೆ ಬಹಳ ಕಷ್ಟದ ಕೆಲಸ. ಅದರಲ್ಲೂ ವಿಮಾನದಲ್ಲಿ ಈ ಎಲ್ಲ ಲಗೇಜ್ಗಳನ್ನ ಹೊತ್ತುಕ್ಕೊಂಡು ಹೋಗೋ ಕಷ್ಟ ಅನುಭವಿಸಿದವನಿಗೇ ಗೊತ್ತು .
ಆದರೆ ಬೆಂಗಳೂರಿನಲ್ಲಿ ವ್ಯಾಸಂಗ ಪೂರ್ಣಗೊಳಿಸಿದ ಅಫ್ಘಾನಿಸ್ತಾನದ ಇಬ್ಬರು ಯುವಕರು ಈ ಸಮಸ್ಯೆಯಿಂದ ಪಾರಾಗೋಕೆ ಭರ್ಜರಿ ಪ್ಲಾನ್ ಮಾಡಿದ್ದಾರೆ.
21 ಹಾಗೂ 27 ವರ್ಷದ ಇಬ್ಬರು ಯುವಕರು ವಿದೇಶಿ ವಿದ್ಯಾರ್ಥಿಗಳ ಮಳಿಗೆಯನ್ನ ಆರಂಭಿಸಿದ್ದಾರೆ. ಚರ್ಚ್ ಸ್ಟ್ರೀಟ್ನಲ್ಲಿರುವ ಈ ಅಂಗಡಿಯಲ್ಲಿ ಇಬ್ಬರು ಯುವಕರು ಮನೆಗೆ ಸಾಗಿಸಲು ಕಷ್ಟವಾಗುವಂತಹ ವಸ್ತುಗಳನ್ನ ಮಾರಾಟಕ್ಕೆ ಇಟ್ಟಿದ್ದಾರೆ.
ರೇಷ್ಮೆ ಶಾಲುಗಳಿಂದ ಹಿಡಿದು ಅಪ್ಘಾನಿ ಆಭರಣಗಳು ಸೇರಿದಂತೆ ಮುಂದೆ ತಮ್ಮೂರಿನಲ್ಲೇ ಖರೀದಿಸಲು ಸಾಧ್ಯವಾಗುವಂತಹ ವಸ್ತುಗಳನ್ನ ಯುವಕರು ಮಾರಾಟಕ್ಕಿಟ್ಟಿದ್ದಾರೆ. ಈ ಮೂಲಕ ತಮ್ಮ ಲಗೇಜ್ ತೂಕವನ್ನ ಇಳಿಸೋಕೆ ಪ್ಲಾನ್ ಮಾಡಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಯುವಕರು, ನಾವು ಈ ವಸ್ತುಗಳನ್ನ ಅನಾಥಾಶ್ರಮಕ್ಕೆ ಕೊಡಬೇಕು ಎಂದು ತೀರ್ಮಾನ ಮಾಡಿದ್ದೆವು. ಆದರೆ ಇದರಲ್ಲಿ ಅನೇಕ ವಸ್ತುಗಳು ಅನಾಥಶ್ರಮದಲ್ಲಿ ಬಳಕೆ ಮಾಡುವಂತದ್ದಲ್ಲ. ಹೀಗಾಗಿ ಇವುಗಳನ್ನ ಮಾರಾಟ ಮಾಡುವ ನಿರ್ಧಾರಕ್ಕೆ ಬಂದೆವು. ಮಾರಾಟದಿಂದ ಬಂದ ಹಣದಲ್ಲಿ ಒಂದು ಭಾಗವನ್ನ ಅನಾಥಾಶ್ರಮಕ್ಕೆ ನೀಡಲಿದ್ದೇವೆ ಎಂದು ಹೇಳಿದ್ರು.