ಬೆಂಗಳೂರು: ಕೊರೊನಾ ಸೋಂಕಿತರು ಹಾಗೂ ಜನಸಾಮಾನ್ಯರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿರುವ ಡಾ. ರಾಜು ಮಹತ್ವದ ಮಾಹಿತಿಯ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ಕೊರೊನಾ ಸೋಂಕಿನಿಂದ ಗುಣಮುಖರಾದ ಶೇ.50ಕ್ಕಿಂತ ಹೆಚ್ಚು ಜನರಲ್ಲಿ ಹಲವಾರು ತೊಂದರೆಗಳು ಕಾಣಿಸಿಕೊಳ್ಳುತ್ತಿದೆ. ಉಸಿರಾಟದ ತೊಂದರೆ, ಅತಿಯಾದ ಸುಸ್ತು, ಮೈ-ಕೈ ನೋವು, ತಲೆ ನೋವು, ಲಿವರ್, ಕಿಡ್ನಿ ಸಮಸ್ಯೆ ಹಾಗೂ ಮಧುಮೇಹದಂತಹ ಸಮಸ್ಯೆ ಕೂಡ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಇಂತಹ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳಬಹುದು. ಕೊರೊನಾ ಸೋಂಕಿತರು ಈ ಅಪಾಯಕಾರಿ ತೊಂದರೆಯಿಂದ ಪಾರಾಗಬೇಕಾದರೆ ಯಾವ ಕ್ರಮ ಅನುಸರಿಸಬೇಕು..? 82 ವರ್ಷದ ತಾತ ಹೇಗೆ ಕೊರೊನಾ ಸೋಂಕು ಗೆದ್ದು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂಬುದನ್ನು ಡಾ.ರಾಜು ತಿಳಿಸಿದ್ದಾರೆ.
ಕೊರೊನಾದಿಂದ ಗುಣಮುಖರಾದ ಹಲವರಲ್ಲಿ ಮತ್ತೆ ಆರೋಗ್ಯ ಸಮಸ್ಯೆ ಕಾಡುತ್ತೆ ಎಂದು ಭಯಪಡುವ ಅಗತ್ಯವಿಲ್ಲ. ಅತಿಯಾದ ಔಷಧಗಳ ಸೇವನೆ ಹಲವು ತೊಂದರೆಗಳನ್ನು ತಂದೊಡ್ಡುತ್ತದೆ. ಅದಕ್ಕೆ ಆಹಾರವೇ ಔಷಧ ಎಂಬ ಪದ್ಧತಿಯನ್ನು ಅನುಸರಿಸುವುದು ಉತ್ತಮ ಪರಿಹಾರ. ಇದಕ್ಕೊಂದು ಉದಾಹರಣೆ 82 ವರ್ಷ ವಯಸ್ಸಿನ ಹಿರಿಯರೊಬ್ಬರು ಕೊರೊನಾ ಗೆದ್ದ ಬಗೆ ಎಂದು ಡಾ.ರಾಜು ವಿವರಿಸಿದ್ದಾರೆ.
ಕುಟುಂಬವೊಂದರ ಹಿರಿಯರಾದ 82 ವರ್ಷದ ತಾತನಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ವೈದ್ಯರು ಹಾಗೂ ಕುಟುಂಬದ ಎಲ್ಲರೂ ತಾತನಿಗೆ ಚಿಕಿತ್ಸೆ ಪಡೆದುಕೊಳ್ಳಲು, ಆಸ್ಪತ್ರೆಗೆ ದಾಖಲಾಗಲು ಎಷ್ಟೇ ಹೇಳಿದರೂ ತಾತ ಸುತಾರಾಂ ಒಪ್ಪಲಿಲ್ಲ. ವೈದ್ಯರು ಕೆಲ ಮಾತ್ರೆಗಳ ಸಲಹೆ ನೀಡಿದರೂ ನಿರಾಕರಿಸಿದ್ದರು. ಆಹಾರದಲ್ಲಿಯೇ ಔಷಧಿ ಅಂಶವಿದೆ ಎಂದು ತನ್ನ ಜೀವನ ಶೈಲಿ, ಆಹಾರ ಪದ್ಧತಿಯಿಂದಾಗಿಯೇ ತಾತ ಕೊರೊನಾದಿಂದ ಸಂಪೂರ್ಣವಾಗಿ ಗುಣಮುಖರಾದರು.
ಇದೀಗ ಅವರು ಪ್ರತಿದಿನ ಯೋಗಾಭ್ಯಾಸ ಮಾಡುತ್ತಾರೆ. ನಿತ್ಯವೂ 6 ಕಿ.ಮೀ. ಸೈಕಲ್ ತುಳಿಯುವ ಉತ್ತಮ ಹವ್ಯಾಸ ರೂಢಿಸಿಕೊಂಡಿದ್ದಾರೆ. ಹೀಗೆ ನಾವು ಸೇವಿಸುವ ಆಹಾರದಲ್ಲಿಯೇ ಅನೇಕ ಔಷಧೀಯ ಗುಣಗಳಿದ್ದು ಅದನ್ನು ತಿಳಿದು ಉತ್ತಮ ಆಹಾರ ಪದ್ಧತಿ ಅನುಸರಿಸುವುದರಿಂದ ಹಾಗೂ ಆತ್ಮವಿಶ್ವಾಸದ ಜೀವನ ಕೂಡ ಕೊರೊನಾದಂತಹ ಮಹಾಮಾರಿಯನ್ನು ಗೆಲ್ಲಲು ಸಹಾಯಕಾರಿಯಾಗಿದೆ ಎಂದು ಡಾ.ರಾಜು ತಿಳಿಸಿದ್ದಾರೆ.
ಕೊರೊನಾದಿಂದ ಅಥವಾ ಯಾವುದೇ ಸೋಂಕಿನಿಂದ ವ್ಯಕ್ತಿ ಬಹಳ ಬೇಗ ಹೊರಬರಲು ಯಾವರೀತಿ ಜೀವನ ಶೈಲಿ ಅನುಸರಿಸಬೇಕು. ಅಲ್ಲದೇ ಕೊರೊನಾ ಸೋಂಕು ಗೆದ್ದ ಹಲವರ ಉದಾಹರಣೆಯನ್ನು ಕೂಡ ಡಾ.ರಾಜು ಈ ವಿಡಿಯೋದಲ್ಲಿ ತಿಳಿಸಿದ್ದಾರೆ.