ಕೊರೊನಾದಿಂದಾಗಿ ಜನರ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾಗಿದೆ. ಮನೆಗೆ ಬಂದರೆ ಸಾಕು ಕೈ, ಕಾಲು, ಮುಖ ತೊಳೆದು ಒಳಗೆ ಬರುವಂತಾಗಿದೆ. ಇತ್ತ ಮನೆಯಿಂದ ಆಚೆ ಬಂದರೆ ಮುಖಕ್ಕೆ ಮಾಸ್ಕ್ ಕಡ್ಡಾಯವಾಗಿದೆ. ಎಲ್ಲೇ ಹೋದರು ಸ್ಯಾನಿಟೈಸರ್ ಕೈಯಲ್ಲೇ ಹಿಡಿದುಕೊಂಡು ಓಡಾಡುತ್ತಿದ್ದಾರೆ ಜನ. ಇದರ ನಡುವೆ ಮದುವೆಗಳಲ್ಲಿ ಸಂಪ್ರದಾಯವೊಂದು ಪ್ರಾರಂಭವಾಗಿದೆ. ಇಷ್ಟು ದಿನ ಮದುವೆಗೆ ಹೋದವರಿಗೆ ತಾಂಬೂಲ ಸೇರಿದಂತೆ ಒಂದಿಷ್ಟು ಗಿಫ್ಟ್ ಗಳನ್ನು ಮದುವೆ ಮನೆಯವರು ನೀಡುತ್ತಿದ್ದರು. ಆದರೆ ಕೊರೊನಾದಿಂದಾಗಿ ಇದು ಕೂಡ ಬದಲಾಗಿದೆ.
ಹೌದು, ಮದುವೆ ಮನೆಯಲ್ಲಿ ಬಂದ ಅತಿಥಿಗಳಿಗೆ ಸ್ಯಾನಿಟೈಸರ್ ಹಾಗೂ ಮಾಸ್ಕ್ ಕೊಡುವ ಪದ್ದತಿ ಪ್ರಾರಂಭವಾದಂತಿದೆ. ಇಂತಹ ಸಂಪ್ರದಾಯವೊಂದು ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಕಮರಿಪೇಟೆಯ ನಿವಾಸಿ ಕಿರಣ ಕಲಬುರ್ಗಿ ಹಾಗೂ ಮಂಜುಶ್ರಿ ಅವರ ವಿವಾಹ ಮಹೋತ್ಸವ ನಡೆದಿದ್ದು, ಈ ಮದುವೆಗೆ ಆಗಮಿಸಿದ ಅತಿಥಿಗಳಿಗೆ ಸ್ಯಾನಿಟೈಸರ್ ಹಾಗೂ ಮಾಸ್ಕ್ ನೀಡಲಾಗಿದೆ.
ಮದುವೆಗೆ ಬಂದ ಅತಿಥಿಗಳು ಈ ಹೊಸ ಸಂಪ್ರದಾಯ ನೋಡಿ ಖುಷಿ ಆಗಿದ್ದಾರೆ. ಕೊರೊನಾದಿಂದಾಗಿ ಮದುವೆಗಳಲ್ಲೂ ಹೆಚ್ಚಿನ ಜನ ಸಂದಣಿ ಸೇರುವಂತಿಲ್ಲ. ಕೇವಲ 50 ಮಂದಿಯಷ್ಟೆ ಸೇರುವಂತೆ ಸರ್ಕಾರ ತಿಳಿಸಿದೆ.