ಸೈಂಟ್ ಮೇರೀಸ್ ಕರ್ನಾಟಕದ ಉಡುಪಿ ಜಿಲ್ಲೆಯ ಮಲ್ಪೆ ಸಮುದ್ರ ಕಿನಾರೆಯಿಂದ ಸ್ವಲ್ಪವೇ ದೂರದಲ್ಲಿರುವ ಒಂದು ದ್ವೀಪ. ಮಲ್ಪೆಯಿಂದ ಪ್ರವಾಸಿಗರಿಗಾಗಿ ನಿತ್ಯ ಅಲ್ಲಿಗೆ ಬೋಟ್ ವ್ಯವಸ್ಥೆ ಇದೆ. ಸೈಂಟ್ ಮೇರೀಸ್ ದ್ವೀಪವನ್ನು ಕೋಕನಟ್ ಐಲ್ಯಾಂಡ್ ಎಂದೂ ಕರೆಯುತ್ತಾರೆ. ಈ ತಾಣಕ್ಕೆ ಸಾಕಷ್ಟು ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ.
ಕರ್ನಾಟಕ ರಾಜ್ಯದ ಕೇವಲ 4 ಭೂವೈಜ್ಞಾನಿಕ ಸ್ಮಾರಕಗಳಲ್ಲಿ ಸೈಂಟ್ ಮೇರೀಸ್ ದ್ವೀಪವು ಒಂದು ಹಾಗು ದೇಶದ 26 ಭೂವೈಜ್ಞಾನಿಕ ಸ್ಮಾರಕಗಳಲ್ಲಿ ಒಂದು ಎಂದು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣೆ ಇಲಾಖೆ ಘೋಷಿಸಿದೆ.
ಇದರ ಮೊದಲ ಹೆಸರು “ತೋನ್ಸೆ ಪಾರ್”. ಇತಿಹಾಸದ ಪ್ರಕಾರ ಪೋರ್ಚುಗೀಸ್ ಶೋಧಕ ವಾಸ್ಕೋಡ ಗಾಮ, ಯುರೋಪ್ನಿಂದ ಭಾರತದ ಕಡೆಗೆ ಸಾಗರ ಮಾರ್ಗದಲ್ಲಿ ಪ್ರಯಾಣಿಸುವಾಗ ಈ ದ್ವೀಪದಲ್ಲಿ ಇಳಿದನೆಂದು ಹಾಗು ಅಲ್ಲಿ ಏಸು ಕ್ರಿಸ್ತನ ಕ್ರೊಸ್ ಅನ್ನು ನೆಟ್ಟು “El Padron de Santa Maria” ಅಂದರೆ “ತಾಯಿ ಮೇರಿಗಾಗಿ ಸಮರ್ಪಿಸಿದ ತಾಣ” ಎಂದು ಹೆಸರಿಟ್ಟ ಎಂದು ನಂಬಲಾಗಿದೆ. ಆದರಿಂದಾಗಿ ಈಗಿನ ಸೈಂಟ್ ಮೇರೀಸ್ ದ್ವೀಪ ಹೆಸರನ್ನು ಪಡೆಯಿತು ಎನ್ನಲಾಗಿದೆ. ಉಡುಪಿಯಿಂದ ಮಲ್ಪೆಗೆ 5 ಕಿಮೀ ದೂರವಿದ್ದು, ಬೀಚ್ ನ ಸೌಂದರ್ಯದೊಂದಿಗೆ ಐಲ್ಯಾಂಡ್ ನ ಸೊಬಗನ್ನು ಸವಿಯಬಹುದು.