ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣ ಸಂಬಂಧ ಈಗಾಗಲೇ ಬಂಧನಕ್ಕೀಡಾಗಿರುವ ನಟಿ ರಾಗಿಣಿ ಆಪ್ತ ರವಿಶಂಕರ್ ಸಿಸಿಬಿ ವಿಚಾರಣೆ ವೇಳೆ ನಟಿಯ ಬಗ್ಗೆ ಹಲವು ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
ಸಿಸಿಬಿ ಅಧಿಕಾರಿಗಳ ವಿಚಾರಣೆ ವೇಳೆ ಆರಂಭದಲ್ಲಿ ನಾಟಕವಾಡುತ್ತಿದ್ದ ರವಿಶಂಕರ್ ಬಳಿಕ ಹಲವು ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ. ನನಗಿಂತಲೂ ಮೊದಲೇ ನಟಿ ರಾಗಿಣಿಗೆ ಡ್ರಗ್ಸ್ ಪೆಡ್ಲರ್ ಪರಿಚಯವಿತ್ತು. ನನಗೆ ಕಳೆದ ಮೂರು ವರ್ಷಗಳಿಂದ ರಾಗಿಣಿ ಪರಿಚಯ. ನನಗೆ ಡ್ರಗ್ಸ್ ಪೆಡ್ಲರ್ ಪರಿಚಯಿಸಿದ್ದೇ ರಾಗಿಣಿ ಎಂದು ಹೇಳಿದ್ದಾನೆನ್ನಲಾಗಿದೆ.
ಅಲ್ಲದೇ ರಾಗಿಣಿ ನಿವಾಸದಲ್ಲೇ ನಾವು ಸಾಕಷ್ಟು ಪಾರ್ಟಿ ಮಾಡಿದ್ದೇವೆ. ನಾನು ಗಾಂಜಾ ಮಾತ್ರ ಸೇವಿಸುತ್ತಿದ್ದೆ. ನಟಿ ರಾಗಿಣಿ ಗಾಂಜಾ ಹಾಗೂ ಡ್ರಗ್ಸ್ ಸೇವಿಸುತ್ತಿದ್ದರು ಎಂದು ಹೇಳಿದ್ದಾನೆ ಎನ್ನಲಾಗುತ್ತಿದೆ.
ರವಿಶಂಕರ್, ನಟಿ ರಾಗಿಣಿ ಹೆಸರು ಬಾಯ್ಬಿಡುತ್ತಿದ್ದಂತೆ ಅಲರ್ಟ್ ಆದ ಸಿಸಿಬಿ ಪೊಲೀಸರು ಕೋರ್ಟ್ ನಿಂದ ಸರ್ಚ್ ವಾರಂಟ್ ಪಡೆದು ನಟಿಯ ಮನೆ ಮೇಲೆ ದಾಳಿ ನಡೆಸಿ, ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.