ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ ಖ್ಯಾತ ಆಂಕರ್ ಕಂ ನಟಿ ಅನುಶ್ರೀ ಹೆಸರು ಕೇಳಿಬಂದಿದ್ದು, ಈ ಸಂಬಂಧ ಅನುಶ್ರೀಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ವಾಟ್ಸಾಪ್ ಮೂಲಕ ನೋಟೀಸ್ ನೀಡಿದೆ ಎನ್ನಲಾಗಿದೆ.
ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೀಡಾಗಿರುವ ಕೊರಿಯೋಗ್ರಾಫರ್ ತರುಣ್, ಸಿಸಿಬಿ ವಿಚಾರಣೆ ವೇಳೆ ತನಗೆ ಕನ್ನಡದ ಖ್ಯಾತ ಆಂಕರ್ ಕಂ ನಟಿಯ ಜೊತೆ ಕ್ಲೋಸ್ ಕಾಂಟ್ಯಾಕ್ಟ್ ಇರುವುದಾಗಿ ಹಾಗೂ ಆಕೆಯೂ ಹಲವು ಪಾರ್ಟಿಗಳಲ್ಲಿ ಭಾಗವಹಿಸಿದ್ದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.
ತರುಣ್ ನೀಡಿದ ಹಲವು ಮಾಹಿತಿ ಆಧರಿಸಿ ಮಂಗಳೂರು ಸಿಸಿಬಿ ಅನುಶ್ರೀ ಅವರಿಗೆ ವಾಟ್ಸಾಪ್ ಮೂಲಕ ನೋಟೀಸ್ ನೀಡಿದ್ದಾರೆ ಎನ್ನಲಾಗಿದೆ.
ಆದರೆ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಆಂಕರ್ ಅನುಶ್ರೀ, ತನಗೆ ಈವರೆಗೂ ಯಾವುದೇ ನೋಟೀಸ್ ಬಂದಿಲ್ಲ. ನಾನು ಬೆಂಗಳೂರಿನ ಮನೆಯಲ್ಲಿಯೇ ಇದ್ದೇನೆ. ನೋಟಿಸ್ ಬಂದರೆ ವಿಚಾರಣೆಗೆ ಹಾಜರಾಗುತ್ತೇನೆ ಎಂದಿದ್ದಾರೆ.
ಇನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಡಾನ್ಸರ್ ಗಳಾದ ಕಿಶೋರ್ ಶೆಟ್ಟಿ, ತರುಣ್ ಹಾಗೂ ಪ್ರತೀಕ್ ಶೆಟ್ಟಿಯ ಪರಿಚಯವಿದೆ. ಕಿಶೋರ್ ಶೆಟ್ಟಿ ನನಗೆ 10 ವರ್ಷಗಳ ಪರಿಚಯ. 10 ವರ್ಷದ ಹಿಂದೆ ನಡೆದಿದ್ದ ಡಾನ್ಸ್ ರಿಯಾಲಿಟಿ ಶೋನಲ್ಲಿ ನಾನು ವಿನ್ನರ್ ಆಗಿದ್ದೆ. ಆ ರಿಯಾಲಿಟಿ ಶೋಗೆ ಅವರು ಕೊರಿಯೋಗ್ರಾಫರ್ ಆಗಿದ್ದರು ಎಂದು ತಿಳಿಸಿದ್ದಾರೆ.
ನಾವೆಲ್ಲ ಒಂದೇ ಊರಿನವರಾಗಿದ್ದರಿಂದ ಮೂವರ ಪರಿಚಯವೂ ಇದೆ. ಆದರೆ ಅವರ ವ್ಯವಹಾರಗಳ ಬಗ್ಗೆ ನನಗೆ ಏನೂ ಮಾಹಿತಿ ಇಲ್ಲ. ಕಳೆದ 2-3 ವರ್ಷಗಳಿಂದ ನನಗೆ ಅವರ ಯಾವುದೇ ಸಂಪರ್ಕವೂ ಇಲ್ಲ. ನಾನು ಅವರ ಯಾವುದೇ ಪಾರ್ಟಿಯಲ್ಲೂ ಭಾಗಿಯಾಗಿಲ್ಲ ಎಂದಿದ್ದಾರೆ.