ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಅಸ್ತಿತ್ವ, ಅಭದ್ರತೆ ಕಾಡುತ್ತಿದೆ. ಹಾಗಾಗಿ ಸ್ವಾರ್ಥಕ್ಕಾಗಿ ಹಿಂದ, ಅಹಿಂದ ಎಂದು ಚಡಪಡಿಸುತ್ತಿದ್ದಾರೆ ಎಂದು ಎಂ.ಎಲ್.ಸಿ., ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ವಿಶ್ವನಾಥ್, ಸಿದ್ದರಾಮಯ್ಯನವರಿಗೆ ನಾನು ನಾನು ಎಂಬ ಸ್ವಾರ್ಥವಿತ್ತು. ಈಗ ಪಕ್ಷ ಹಾಗೂ ಸಮುದಾಯ ಎರಡರಿಂದಲೂ ಏಕಾಂಗಿಯಾಗಿದ್ದಾರೆ. ಹೀಗಾಗಿ ರಾಜಕೀಯ ಅಸ್ತಿತ್ವಕ್ಕೆ ಚಡಪಡಿಕೆ ಶುರುವಾಗಿದೆ ಎಂದರು.
ಪ್ರಧಾನಿ ಮೋದಿ ಒಬ್ಬ ‘ಹೇಡಿ’ ಎಂದ ಕಾಂಗ್ರೆಸ್ ನಾಯಕ ರಾಹುಲ್
ತಮ್ಮ ಅಭದ್ರತೆ ಮುಚ್ಚಿಕೊಳ್ಳಲು ಅಹಿಂದ ಬಳಸುತ್ತಿದ್ದಾರೆ. ಈಗಾಗಲೇ ಅವರು ಅಲ್ಪಸಂಖ್ಯಾತರನ್ನು ತುಳಿದು ಹಾಕಿದ್ದಾರೆ. ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್ ಇದ್ದಂತೆ. ಟ್ರಂಪಾಯಣದಂತೆ ಸಿದ್ದರಾಯಣ ಶುರುವಾಗಿದೆ. ಸಿದ್ದರಾಮಯ್ಯ ಸೋಲನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅದೃಷ್ಟದಿಂದ ಸಿಎಂ ಆದರು. ಅವರು ಎಂದಿಗೂ ಯಾರ ಯಶಸ್ಸನ್ನೂ ಸಹಿಸುವುದಿಲ್ಲ. ತಮ್ಮದೇ ಸಮುದಾಯದ ಸ್ವಾಮೀಜಿ ಹೋರಾಟವನ್ನೂ ಸಹಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಮಿಠಾಯಿ ಕಂಡ ಮಗುವಿನಂತಾಗಿದ್ದಾರೆ. ಸಿದ್ದರಾಮಯ್ಯನವರಿಗೆ ಸಿಎಂ ಬಿ.ಎಸ್.ವೈ. ಅವರನ್ನು ನೋಡಿದಾಗ ಸಿಎಂ ಎಂಬ ಮಿಠಾಯಿ ನೆನಪಾಗುತ್ತೆ. ಅವರಿಗೆ ಅದನ್ನು ಒಮ್ಮೆ ಪಡೀಬೇಕು ಎಂಬ ಚಡಪಡಿಕೆ ಶುರುವಾಗುತ್ತೆ. ಹೀಗಾಗಿ ಪದೇ ಪದೇ ನಾಯಕತ್ವದ ಬದಲಾವಣೆ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ ಎಂದು ಕಿಡಿಕಾರಿದರು.