ಬೆಂಗಳೂರು: ಶಾಲೆಗಳನ್ನು ಆರಂಭಿಸುವ ಬಗ್ಗೆ ಸರ್ಕಾರಕ್ಕೆ ಯಾವುದೇ ರೀತಿಯ ಧಾವಂತಗಳಿಲ್ಲ. ಸಧ್ಯಕ್ಕೆ ಯಾವುದೇ ಶಾಲೆ – ಕಾಲೇಜುಗಳನ್ನು ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸುರೇಶ್ ಕುಮಾರ್, ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲೆ ಆರಂಭದ ಬಗ್ಗೆ ಯಾವುದೇ ರೀತಿಯ ನಿರ್ಧಾರ ಕೈಗೊಂಡಿಲ್ಲ. ಪೋಷಕರು, ವಿದ್ಯಾರ್ಥಿಗಳು ಗೊಂದಲಕ್ಕೀಡಾಗುವುದು ಬೇಡ ಎಂದರು.
ಈಗಾಗಲೇ ಸುಮಾರು 40 ಶಾಸಕರ ಜೊತೆ ಚರ್ಚೆ ನಡೆಸಿದ್ದೇನೆ. ಅವರಿಂದಲೂ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಒಂದು ವೇಳೆ ಶಾಲೆ ಆರಂಭಿಸಬೇಕು ಎಂದರೆ ಯಾವ ರೀತಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಮಾತನಾಡಿದ್ದೇನೆ. ಸಂಸದರ ಜೊತೆಯೂ ಚರ್ಚೆ ನಡೆಸಲು ಮುಂದಾಗಿದ್ದೇನೆ. ಶಾಲೆಗಳ ಆರಂಭದ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿದರು.
ಶಾಲೆಗಳ ಆರಂಭ ವಿಳಂಬವಾದಷ್ಟು ಬಾಲ್ಯ ವಿವಾಹಗಳು ಹೆಚ್ಚುವ, ಮಕ್ಕಳು ಕೂಲಿ ಕೆಲಸಗಳಿಗೆ ಹೋಗುವ ಸಾಧ್ಯತೆ ದಟ್ಟವಾಗಿವೆ. ಈ ಬಗ್ಗೆಯೂ ನಮಗೆ ಆತಂಕಗಳಿವೆ. ಆದರೆ ಕೊರೊನಾ ಅಟ್ಟಹಾಸ ಹೆಚ್ಚುತ್ತಿರುವುದರಿಂದ ಮಕ್ಕಳ ಹಿತದೃಷ್ಟಿಯಿಂದ ಶಾಲೆ ಆರಂಭ ಮಾಡುವ ಬಗ್ಗೆ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ಹೇಳಿದರು.